< ನ್ಯಾಯಸ್ಥಾಪಕರು 15 >

1 ಸ್ವಲ್ಪ ಸಮಯವಾದ ತರುವಾಯ, ಗೋಧಿಯ ಸುಗ್ಗಿಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡುವುದಕ್ಕೆ ಒಂದು ಮೇಕೆಯ ಮರಿಯನ್ನು ತೆಗೆದುಕೊಂಡುಹೋಗಿ, ಅವಳ ತಂದೆಗೆ, “ನನ್ನ ಹೆಂಡತಿಯ ಕೋಣೆಗೆ ಹೋಗುತ್ತೇನೆ,” ಎಂದನು.
ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವುದಕ್ಕೋಸ್ಕರ ಹೊರಟುಹೋಗಿ ಆಕೆಯ ತಂದೆಗೆ, “ನಾನು ನನ್ನ ಹೆಂಡತಿಯ ಹತ್ತಿರ ಒಳಗಿನ ಕೋಣೆಗೆ ಹೋಗುತ್ತೇನೆ” ಅಂದನು. ಅದಕ್ಕೆ ಅವನು, “ಹೋಗಬಾರದು;
2 ಆದರೆ ಅವಳ ತಂದೆಯು ಅವನನ್ನು ಅನುಮತಿಸದೆ ಅವನಿಗೆ, “ನೀನು ಅವಳನ್ನು ಪೂರ್ಣವಾಗಿ ಹಗೆ ಮಾಡಿದೆ ಎಂದು ನಾನು ನಿಜವಾಗಿ ತಿಳಿದು, ಅವಳನ್ನು ನಿನ್ನ ಜೊತೆಯವನಿಗೆ ಮದುವೆ ಮಾಡಿಕೊಟ್ಟೆನು. ಅವಳ ತಂಗಿ ಅವಳಿಗಿಂತ ಸುಂದರಿಯಾಗಿದ್ದಾಳೆ. ಅವಳಿಗೆ ಬದಲಾಗಿ ಇವಳನ್ನು ಮದುವೆಯಾಗು,” ಎಂದನು.
ನೀನು ನಿಜವಾಗಿ ಆಕೆಯನ್ನು ಹಗೆಮಾಡುತ್ತೀಯೆಂದು ತಿಳಿದು ಅವಳನ್ನು ನಿನ್ನ ಗೆಳೆಯರಲ್ಲೊಬ್ಬನಿಗೆ ಮದುವೆಮಾಡಿಕೊಟ್ಟೆನು. ಆಕೆಯ ತಂಗಿಯು ಆಕೆಗಿಂತ ಸುಂದರಿಯಾಗಿದ್ದಾಳಲ್ಲಾ; ಈಕೆಯು ನಿನಗಿರಲಿ” ಅಂದನು.
3 ಆಗ ಸಂಸೋನನು, “ಅವರನ್ನು ಕುರಿತು, ನಾನು ಈ ಸಾರಿ ನಿರಪರಾಧಿ ಫಿಲಿಷ್ಟಿಯರಿಗೆ ಕೇಡನ್ನು ಮಾಡುವ ಸರಿಯಾದ ಸಮಯವಿದು,” ಎಂದು ಹೇಳಿ, ಹೊರಟುಹೋಗಿ,
ಆಗ ಸಂಸೋನನು, “ಈ ಸಾರಿ ನಾನು ಫಿಲಿಷ್ಟಿಯರಿಗೆ ಕೇಡುಮಾಡುವುದಾದರೆ ತಪ್ಪು ನನ್ನದಲ್ಲ” ಎಂದುಕೊಂಡು ಹೋಗಿ
4 ಮುನ್ನೂರು ನರಿಗಳನ್ನು ಹಿಡಿದು, ಪಂಜುಗಳನ್ನು ತೆಗೆದುಕೊಂಡು ಬಂದು, ಬಾಲಕ್ಕೆ ಬಾಲ ಸೇರಿಸಿ, ಎರಡು ಬಾಲಗಳ ನಡುವೆ ಒಂದು ಪಂಜನ್ನು ಕಟ್ಟಿದನು.
ಮುನ್ನೂರು ನರಿಗಳನ್ನು ಹಿಡಿದು, ಬಾಲಕ್ಕೆ ಬಾಲವನ್ನು ಸೇರಿಸಿ ಕಟ್ಟಿ, ಅವುಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ, ಪಂಜುಗಳಿಗೆ ಬೆಂಕಿಹೊತ್ತಿಸಿ,
5 ಬಾಲಗಳಿಗೆ ಬೆಂಕಿ ಹಚ್ಚಿ, ಅವುಗಳನ್ನು ಫಿಲಿಷ್ಟಿಯರ ಪೈರಿನಲ್ಲಿ ಕಳುಹಿಸಿಬಿಟ್ಟು, ತೆನೆ ಗೂಡುಗಳನ್ನೂ, ಪೈರುಗಳನ್ನೂ, ದ್ರಾಕ್ಷಿತೋಟಗಳನ್ನೂ, ಹಿಪ್ಪೆಯ ತೋಪುಗಳನ್ನೂ ಕೂಡ ಸುಟ್ಟುಬಿಟ್ಟನು.
ಆ ನರಿಗಳನ್ನು ಫಿಲಿಷ್ಟಿಯರ ಹೊಲಗಳಲ್ಲಿ ಬಿಟ್ಟು, ಅವರ ತೆನೆಗೂಡುಗಳನ್ನೂ, ಇನ್ನೂ ಕೊಯ್ಯದೆ ಇದ್ದ ಬೆಳೆಯನ್ನೂ, ಎಣ್ಣೆಯ ಮರಗಳ ತೋಟಗಳನ್ನೂ ಸುಟ್ಟುಬಿಟ್ಟನು.
6 ಫಿಲಿಷ್ಟಿಯರು, “ಇದನ್ನು ಮಾಡಿದವರು ಯಾರು?” ಎಂದರು. ಅದಕ್ಕೆ ಅವರು, “ತಿಮ್ನಾದವನ ಅಳಿಯನಾದ ಸಂಸೋನನು ಮಾಡಿದನು. ಏಕೆಂದರೆ ಇವನು ಅವನ ಹೆಂಡತಿಯನ್ನು ತೆಗೆದುಕೊಂಡು, ಅವನ ಜೊತೆಗಾರನಿಗೆ ಕೊಟ್ಟನು,” ಎಂದರು. ಆಗ ಫಿಲಿಷ್ಟಿಯರು ಬಂದು, ಅವಳನ್ನೂ, ಅವಳ ತಂದೆಯನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು.
ಫಿಲಿಷ್ಟಿಯರು ಇದನ್ನು ಮಾಡಿದವರು ಯಾರೆಂದು ವಿಚಾರಿಸುವಲ್ಲಿ ತಿಮ್ನಾ ಊರಿನವನ ಅಳಿಯನಾದ ಸಂಸೋನನೆಂದು ಗೊತ್ತಾಯಿತು. ಅವನ ಮಾವನು ಅವನ ಹೆಂಡತಿಯನ್ನು ಬೇರೊಬ್ಬನಿಗೆ ಕೊಟ್ಟುಬಿಟ್ಟದ್ದೇ ಇದಕ್ಕೆ ಕಾರಣವೆಂದು ಅವರು ತಿಳಿದು, ಆಕೆಯನ್ನೂ, ಆಕೆಯ ತಂದೆಯನ್ನೂ ಸುಟ್ಟುಬಿಟ್ಟರು.
7 ಸಂಸೋನನು ಅವರಿಗೆ, “ನೀವು ಈ ಪ್ರಕಾರ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿಗೆ ಮುಯ್ಯಿ ತೀರಿಸದೆ ಬಿಡುವುದಿಲ್ಲ,” ಎಂದನು.
ಸಂಸೋನನು ಅವರಿಗೆ, “ನೀವು ಹೀಗೆ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿತೀರಿಸದೆ ಬಿಡುವುದಿಲ್ಲ” ಎಂದು ಹೇಳಿ
8 ಅವರ ಮೇಲೆ ಬಲವಾಗಿ ಬಿದ್ದು, ಅವರಲ್ಲಿ ಅನೇಕರನ್ನು ಕೊಂದುಹಾಕಿ ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
ಅವರ ತೊಡೆ, ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿ, ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
9 ಫಿಲಿಷ್ಟಿಯರು ಹೊರಟುಹೋಗಿ ಯೆಹೂದದಲ್ಲಿ ಇಳಿದು, ಲೇಹಿಯಲ್ಲಿ ವ್ಯಾಪಿಸಿದರು.
ಆಗ ಫಿಲಿಷ್ಟಿಯರು ಹೊರಟು ಯೆಹೂದಾ ಪ್ರಾಂತ್ಯದ ಲೆಹೀ ಎಂಬಲ್ಲಿಗೆ ಹೋಗಿ ಪಾಳೆಯಮಾಡಿಕೊಂಡರು.
10 ಯೆಹೂದದಲ್ಲಿ ವಾಸಿಸುವ ಜನರು ಅವರಿಗೆ, “ನೀವು ನಮಗೆ ವಿರೋಧವಾಗಿ ಬಂದದ್ದೇನು?” ಎಂದರು. ಫಿಲಿಷ್ಟಿಯರು, “ಸಂಸೋನನು ನಮಗೆ ಮಾಡಿದ ಹಾಗೆ ನಾವು ಅವನಿಗೆ ಪ್ರತಿಯಾಗಿ ಮಾಡುವುದಕ್ಕೆ, ಅವನನ್ನು ಹಿಡಿದು ಕಟ್ಟುವುದಕ್ಕೆ ಬಂದೆವು,” ಎಂದರು.
೧೦ನೀವು ನಮಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದೇಕೆ ಎಂದು ಯೆಹೂದ್ಯರು ಅವರನ್ನು ಕೇಳಲು ಅವರು, “ಸಂಸೋನನನ್ನು ಹಿಡಿದು ಕಟ್ಟಿ ಅವನು ನಮಗೆ ಮಾಡಿದಂತೆಯೇ ಅವನಿಗೂ ಮಾಡಬೇಕೆಂದು ಬಂದೆವು” ಎಂದು ಉತ್ತರಕೊಟ್ಟರು.
11 ಆಗ ಯೆಹೂದದಲ್ಲಿ ಮೂರು ಸಾವಿರ ಜನರು ಏಟಾಮ್ ಬಂಡೆಯ ಮೇಲಕ್ಕೆ ಏರಿಹೋಗಿ, ಸಂಸೋನನಿಗೆ, “ಫಿಲಿಷ್ಟಿಯರು ನಮ್ಮನ್ನು ಆಳುತ್ತಾ ಇದ್ದಾರೆಂದು ನಿನಗೆ ಗೊತ್ತಿಲ್ಲವೋ? ನೀನು ನಮಗೆ ಹೀಗೆ ಏಕೆ ಮಾಡಿದೆ?” ಎಂದರು. ಅದಕ್ಕವನು, “ಅವರು ನನಗೆ ಮಾಡಿದ ಪ್ರಕಾರವೇ, ನಾನು ಅವರಿಗೆ ಮಾಡಿದೆನು,” ಎಂದು ಅವರಿಗೆ ಹೇಳಿದನು.
೧೧ಮೂರು ಸಾವಿರ ಮಂದಿ ಯೆಹೂದ್ಯರು ಏಟಾಮ್ ಗಿರಿಗೆ ಹೋಗಿ ಸಂಸೋನನಿಗೆ, “ಫಿಲಿಷ್ಟಿಯರು ನಮ್ಮ ಮೇಲೆ ದೊರೆತನಮಾಡುತ್ತಿದ್ದಾರೆ ಎಂಬುದು ನಿನಗೆ ಗೊತ್ತಿಲ್ಲವೋ? ಹೀಗೆ ಯಾಕೆ ಮಾಡಿದಿ?” ಎಂದು ಕೇಳಲು ಅವನು, “ಅವರು ನನಗೆ ಮಾಡಿದಂತೆಯೇ ನಾನು ಅವರಿಗೆ ಮಾಡಿದ್ದೇನೆ” ಅಂದನು.
12 ಆಗ ಅವರು ಅವನಿಗೆ, “ನಾವು ನಿನ್ನನ್ನು ಕಟ್ಟಿ, ಫಿಲಿಷ್ಟಿಯರ ಕೈಗೆ ಒಪ್ಪಿಸಿಕೊಡಲು ಬಂದೆವು,” ಎಂದರು. ಸಂಸೋನನು ಅವರಿಗೆ, “ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ನನಗೆ ಆಣೆ ಇಡಿರಿ,” ಎಂದನು.
೧೨ಅವರು, “ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಬೇಕೆಂದು ಬಂದಿದ್ದೇವೆ” ಅನ್ನಲು ಸಂಸೋನನು, “ಹಾಗಾದರೆ ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿರಿ” ಎಂದನು.
13 ಅದಕ್ಕವರು, “ಇಲ್ಲ; ಆದರೆ ನಿನ್ನನ್ನು ಭದ್ರವಾಗಿ ಕಟ್ಟಿ, ಅವರ ಕೈಯಲ್ಲಿ ಒಪ್ಪಿಸಿಕೊಡುವೆವು. ನಾವು ನಿನ್ನನ್ನು ನಿಜವಾಗಿ ಕೊಲ್ಲುವುದೇ ಇಲ್ಲ,” ಎಂದರು. ಎರಡು ಹೊಸ ಹಗ್ಗಗಳಿಂದ ಅವನನ್ನು ಕಟ್ಟಿ, ಬಂಡೆಯ ಮೇಲಿನಿಂದ ತಂದರು.
೧೩ಅದಕ್ಕೆ ಅವರು, “ನಾವು ಸತ್ಯವಾಗಿ ನಿನ್ನನ್ನು ಕೊಲ್ಲುವುದಿಲ್ಲ; ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸುತ್ತೇವೆ” ಎಂದು ಹೇಳಿ ಅವನನ್ನು ಎರಡು ಹೊಸ ಹಗ್ಗಗಳಿಂದ ಕಟ್ಟಿ ಗುಡ್ಡದ ಮೇಲಿನಿಂದ ಕರತಂದರು.
14 ಅವನು ಲೇಹಿಗೆ ಬಂದಾಗ, ಫಿಲಿಷ್ಟಿಯರು ಅವನ ಎದುರಾಗಿ ಆರ್ಭಟಿಸುತ್ತಾ ಬಂದರು. ಯೆಹೋವ ದೇವರ ಆತ್ಮ ಅವನ ಮೇಲೆ ಬಲವಾಗಿ ಬಂದದ್ದರಿಂದ, ಅವನ ತೋಳುಗಳಲ್ಲಿ ಕಟ್ಟಿದ್ದ ಸೆಣಬಿನ ಹಗ್ಗಗಳು ಬೆಂಕಿಯಲ್ಲಿ ಸುಟ್ಟುಹೋದ ದಾರದ ಹಾಗೆ ಆದವು. ಅವನ ಕೈಯಲ್ಲಿ ಇದ್ದ ಕಟ್ಟುಗಳು ಬಿಚ್ಚಿಬಿದ್ದವು.
೧೪ಸಂಸೋನನು ಲೆಹೀಯ ಸಮೀಪಕ್ಕೆ ಬರಲು ಫಿಲಿಷ್ಟಿಯರು ಅವನನ್ನು ಕಂಡು ಆರ್ಭಟಿಸಿದರು. ಯೆಹೋವನ ಆತ್ಮವು ಅವನ ಮೇಲೆ ಬಂದದ್ದರಿಂದ ಅವನ ರಟ್ಟೆಗಳಿಗೆ ಸುತ್ತಲೂ ಕಟ್ಟಿದ್ದ ಹಗ್ಗಗಳು ಸುಟ್ಟ ಸೆಣಬಿನ ಹಾಗಾದವು; ಕೈಗೆ ಹಾಕಿದ ಬೇಡಿಗಳು ಕಳಚಿ ಬಿದ್ದವು.
15 ಅವನು ಒಂದು ಕತ್ತೆಯ ದವಡೆಯ ಹೊಸ ಎಲುಬನ್ನು ಕಂಡುಕೊಂಡು, ತನ್ನ ಕೈಯನ್ನು ಚಾಚಿ ತೆಗೆದುಕೊಂಡು, ಅದರಿಂದ ಸಾವಿರ ಜನರನ್ನು ವಧಿಸಿಬಿಟ್ಟನು.
೧೫ಅಲ್ಲಿ ಒಂದು ಕತ್ತೆಯ ದವಡೇ ಎಲುಬು ಬಿದ್ದಿತ್ತು. ಅದು ಇನ್ನೂ ಹಸಿದಾಗಿತ್ತು. ಅವನು ಅದನ್ನು ತೆಗೆದುಕೊಂಡು ಅದರಿಂದ ಸಾವಿರ ಜನರನ್ನು ಸಂಹರಿಸಿಬಿಟ್ಟು,
16 ಆಗ ಸಂಸೋನನು ಹೇಳಿದ್ದೇನೆಂದರೆ, “ಕತ್ತೆಯ ದವಡೆಯಿಂದ ನಾನು ಅವರನ್ನು ಹೆಣಗಳನ್ನಾಗಿ ಮಾಡಿದ್ದೇನೆ. ಕತ್ತೆ ದವಡೆಯ ಎಲುಬಿನಿಂದ ಒಂದು ಸಾವಿರ ಜನರನ್ನು ಕೊಂದಿದ್ದೇನೆ.”
೧೬“ಕತ್ತೆಯ ದವಡೇ ಎಲುಬಿನಿಂದ ಸಾವಿರ ಜನರನ್ನು ಸಾಯಿಸಿದೆನು; ಕತ್ತೆಯ ದವಡೇ ಎಲುಬಿನಿಂದ ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆನು” ಎಂದು ಹೇಳಿ,
17 ಅವನು ಮಾತನಾಡಿ ತೀರಿಸಿದಾಗ, ತನ್ನ ಕೈಯಲ್ಲಿದ್ದ ದವಡೆಯ ಎಲುಬನ್ನು ಎಸೆದುಬಿಟ್ಟನು. ಆ ಸ್ಥಳಕ್ಕೆ ರಾಮತ್ ಲೇಹಿ ಎಂಬ ಹೆಸರಾಯಿತು.
೧೭ತನ್ನ ಕೈಯಲ್ಲಿದ್ದ ಎಲುಬನ್ನು ಬೀಸಾಡಿದನು. ಆ ಸ್ಥಳಕ್ಕೆ ರಾಮತ್ ಲೆಹೀ ಎಂದು ಹೆಸರಾಯಿತು.
18 ಅವನಿಗೆ ಬಹಳ ಬಾಯಾರಿಕೆಯಾದದರಿಂದ ಅವನು ಯೆಹೋವ ದೇವರಿಗೆ ಮೊರೆಯಿಟ್ಟನು, “ನಿಮ್ಮ ಸೇವಕನಿಗೆ ನೀವು ಈ ಮಹಾ ರಕ್ಷಣೆಯನ್ನು ಕೊಟ್ಟಿದ್ದೀರಿ. ಈಗ ಬಾಯಾರಿಕೆಯಿಂದ ಬಳಲಿ, ಸುನ್ನತಿಯಾಗದ ಈ ಜನರ ಕೈಯಲ್ಲಿ ನಾನು ಬೀಳಬೇಕೋ?” ಎಂದನು.
೧೮ಅವನು ಬಹಳ ಬಾಯಾರಿದವನಾಗಿ ಯೆಹೋವನಿಗೆ, “ನೀನು ನಿನ್ನ ಸೇವಕನ ಮೂಲಕವಾಗಿ ಈ ಮಹಾಜಯವನ್ನುಂಟುಮಾಡಿದ ಮೇಲೆ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೋ” ಎಂದು ಮೊರೆಯಿಡಲು
19 ಆಗ ದೇವರು ಲೇಹಿಯಲ್ಲಿ ಟೊಳ್ಳಾದ ಸ್ಥಳವನ್ನು ಸೀಳಿಬಿಟ್ಟರು. ಅದರೊಳಗಿಂದ ನೀರು ಹೊರಟು ಬಂತು. ಸಂಸೋನನು ಆ ನೀರನ್ನು ಕುಡಿದದ್ದರಿಂದ ಅವನ ಬಲ ತಿರುಗಿಬಂದು, ಅವನು ಚೇತರಿಸಿಕೊಂಡನು. ಆದ್ದರಿಂದ ಏನ್ ಹಕ್ಕೋರೇ ಎಂದು ಅದಕ್ಕೆ ಹೆಸರಾಯಿತು. ಈ ದಿವಸದವರೆಗೂ ಅದು ಲೇಹಿಯಲ್ಲಿ ಇದೆ.
೧೯ಆತನು ಲೇಹಿಯಲ್ಲಿ ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಲು ಅವನು ಅದನ್ನು ಕುಡಿದು ಪುನಃ ಚೈತನ್ಯಹೊಂದಿದನು. ಆದ್ದರಿಂದ ಅದಕ್ಕೆ ಏನ್ ಹಕ್ಕೋರೇ ಎಂದು ಹೆಸರಾಯಿತು; ಅದು ಇಂದಿನ ವರೆಗೂ ಲೆಹೀಯಲ್ಲಿರುತ್ತದೆ.
20 ಸಂಸೋನನು ಫಿಲಿಷ್ಟಿಯರ ದಿವಸಗಳಲ್ಲಿ ಇಪ್ಪತ್ತು ವರ್ಷ ಇಸ್ರಾಯೇಲಿಗೆ ನ್ಯಾಯತೀರಿಸಿದನು.
೨೦ಫಿಲಿಷ್ಟಿಯರ ಪ್ರಾಬಲ್ಯದಲ್ಲಿ ಸಂಸೋನನು ಇಸ್ರಾಯೇಲ್ಯರನ್ನು ಇಪ್ಪತ್ತು ವರ್ಷಗಳ ವರೆಗೆ ಪಾಲಿಸಿದನು.

< ನ್ಯಾಯಸ್ಥಾಪಕರು 15 >