< ಯೆರೆಮೀಯನು 3 >

1 “ಒಬ್ಬನು ತನ್ನ ಹೆಂಡತಿಯನ್ನು ವಿಚ್ಛೇದನಮಾಡಿದರೆ, ಅವಳು ಅವನನ್ನು ಬಿಟ್ಟು ಹೋಗಿ ಬೇರೆಯವನ ಜೊತೆ ಇದ್ದರೆ, ಅವನು ಅವಳನ್ನು ಮತ್ತೆ ಸೇರಿಸಿಕೊಳ್ಳುವನೋ? ಸೇರಿಸಿಕೊಂಡರೆ, ಆ ದೇಶವು ಸಂಪೂರ್ಣವಾಗಿ ಅಪವಿತ್ರವಾಗುವುದಿಲ್ಲವೋ? ಆದರೆ ನೀನು ನಿನ್ನ ಅನೇಕ ಪ್ರೇಮಿಗಳ ಸಂಗಡ ವೇಶ್ಯೆಯಂತೆ ಇದ್ದೀ. ನೀನು ಈಗ ನನ್ನ ಬಳಿಗೆ ಹಿಂತಿರುಗುವೆಯಾ?” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆಹೋವನು ಹೀಗೆನ್ನುತ್ತಾನೆ, “ಗಂಡನು ತ್ಯಜಿಸಿದವಳು ಅವನಿಂದ ಹೊರಟು ಮತ್ತೊಬ್ಬನ ಹೆಂಡತಿಯಾದ ಮೇಲೆ, ಅವಳನ್ನು ಮೊದಲ ಗಂಡನು ತಿರುಗಿ ಸೇರಿಸಿಕೊಂಡಾನೇ? ಸೇರಿಸಿಕೊಂಡರೆ ಆ ದೇಶವು ಕೇವಲ ಅಪವಿತ್ರವಾಗಿ ಹೋಗುವುದಲ್ಲವೇ? ಹೀಗಿರಲು ಬಹುಮಂದಿಯೊಡನೆ ವ್ಯಭಿಚಾರ ಮಾಡಿದ ನೀನು ನನ್ನ ಬಳಿಗೆ ಹಿಂದಿರುಗಿ ಬರುತ್ತಿಯಾ?
2 “ನಿನ್ನ ಕಣ್ಣುಗಳನ್ನು ಉನ್ನತ ಸ್ಥಳಗಳ ಮೇಲೆ ಎತ್ತು. ಯಾವುದರಲ್ಲಿ ನಿನ್ನನ್ನು ನೀನು ಕೆಡಿಸಿಕೊಳ್ಳಲಿಲ್ಲ? ಮರುಭೂಮಿಯಲ್ಲಿ ಅರಬೀಯನ ಹಾಗೆ ದಾರಿಗಳಲ್ಲಿ ಅವರಿಗೋಸ್ಕರ ಕೂತುಕೊಂಡಿದ್ದೀ. ಹೀಗೆ ನಿನ್ನ ವೇಶ್ಯೆತನಗಳಿಂದಲೂ, ನಿನ್ನ ಕೆಟ್ಟತನಗಳಿಂದಲೂ ದೇಶವನ್ನು ಅಪವಿತ್ರ ಮಾಡಿದ್ದೀಯೆ.
ಕಣ್ಣೆತ್ತಿ ಬೋಳು ಗುಡ್ಡಗಳನ್ನು ನೋಡು, ಯಾವುದರಲ್ಲಿ ನಿನ್ನನ್ನು ನೀನು ಕೆಡಿಸಿಕೊಳ್ಳಲಿಲ್ಲ? ಅರಬಿಯನು ಅಡವಿಯಲ್ಲಿ ಹೊಂಚುಹಾಕುವ ಹಾಗೆ ನೀನು ದಾರಿಯ ಮಗ್ಗುಲಲ್ಲಿ ಅವರಿಗಾಗಿ ಹೊಂಚು ಹಾಕುತ್ತಾ ಕುಳಿತಿದ್ದಿ; ನಿನ್ನ ವ್ಯಭಿಚಾರದಿಂದಲೂ, ನಿನ್ನ ಕೆಟ್ಟತನದಿಂದಲೂ ದೇಶವನ್ನು ಅಪವಿತ್ರಮಾಡಿದ್ದಿ.
3 ಆದ್ದರಿಂದ ಮಳೆಗಳು ನಿಂತುಹೋದವು, ಹಿಂಗಾರೇ ಆಗಲಿಲ್ಲ. ವೇಶ್ಯೆಯ ನೋಟ ನಿನಗಿತ್ತು. ನಾಚುವುದನ್ನು ನಿರಾಕರಿಸಿದೆ.
ಆದಕಾರಣ ಹದಮಳೆಗೆ ಅಡ್ಡಿಯಾಯಿತು, ಹಿಂಗಾರೂ ಆಗಲಿಲ್ಲ; ಆದರೂ ನೀನು ವ್ಯಭಿಚಾರಿಯಾಗಿ ನಾಚಿಕೆಗೆಟ್ಟಿದ್ದಿ.
4 ಈಗಲೂ ನನಗೆ, ‘ನನ್ನ ತಂದೆಯೇ, ನನ್ನ ಯೌವನದ ಸ್ನೇಹಿತನು ನೀನೇ,’ ಎಂದು ನೀನು ಕರೆಯುತ್ತಿರುವೆ.
ಈಗ ನನ್ನನ್ನು, ‘ನನ್ನ ತಂದೆ, ನನ್ನ ಯೌವನದ ಆಪ್ತನು’ ಎಂದು ಕರೆಯುತ್ತೀಯಲ್ಲಾ.
5 ಆತನು ನಿತ್ಯ ಕೋಪಮಾಡುವವನೋ? ಕೊನೆಯ ತನಕ ಕೋಪವನ್ನು ಇಟ್ಟುಕೊಳ್ಳುವನೋ? ಇಗೋ, ನೀನು ಹೀಗೆ ಮಾತನಾಡಿದರೇನು? ಆದರೆ ನಿನ್ನಿಂದ ಸಾಧ್ಯವಾಗುವಷ್ಟು ದುಷ್ಕೃತ್ಯಗಳನ್ನು ಮಾಡಿದ್ದಿ.”
‘ಆತನು ನಿತ್ಯ ಕೋಪಮಾಡುವವನೋ? ಕೊನೆಯ ತನಕ ಕೋಪವನ್ನು ಇಟ್ಟುಕೊಳ್ಳುವನೋ?’ ಎಂದು ಅಂದುಕೊಳ್ಳುತ್ತಿದ್ದಿ. ಇಗೋ, ನೀನು ಹೀಗೆ ಮಾತನಾಡಿದರೇನು? ಅನೇಕ ದುಷ್ಕೃತ್ಯಗಳನ್ನು ನಡೆಸಿ ಕೃತಾರ್ಥಳಾಗಿರುವೆ.” ಎಂಬುದೇ.
6 ಯೆಹೋವ ದೇವರು ಅರಸನಾದ ಯೋಷೀಯನ ದಿವಸಗಳಲ್ಲಿ ನನಗೆ ಹೇಳಿದ್ದೇನೆಂದರೆ: “ಭ್ರಷ್ಟಳಾದ ಇಸ್ರಾಯೇಲು ಮಾಡಿದ್ದನ್ನು ನೀನು ನೋಡಿದೆಯೋ? ಅವಳು ಒಂದೊಂದು ಎತ್ತರವಾದ ಬೆಟ್ಟದ ಮೇಲೆಯೂ, ಒಂದೊಂದು ಹಸುರಾದ ಮರದ ಕೆಳಗೆಯೂ ಹೋಗಿ, ಅಲ್ಲಿ ವೇಶ್ಯೆತನ ಮಾಡಿದ್ದಾಳೆ.
ಅರಸನಾದ ಯೋಷೀಯನ ಕಾಲದಲ್ಲಿ ಯೆಹೋವನು ನನಗೆ ಹೀಗೆ ಹೇಳಿದನು, “ಭ್ರಷ್ಟಳಾದ ಇಸ್ರಾಯೇಲ್ ಮಾಡಿದ್ದನ್ನು ನೋಡಿದೆಯಾ? ಅವಳು ಎತ್ತರವಾದ ಎಲ್ಲಾ ಗುಡ್ಡಗಳನ್ನು ಹತ್ತಿ, ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳ ಕೆಳಗೆ ಹೋಗಿ ವ್ಯಭಿಚಾರಿಯಾಗಿ ನಡೆದಳಷ್ಟೆ.
7 ಅವಳು ಇವುಗಳನ್ನೆಲ್ಲಾ ಮಾಡಿದ ಮೇಲೆ ನಾನು ನನ್ನ ಬಳಿಗೆ ತಿರುಗಿಕೋ ಎಂದೆನು. ಆದರೆ ಅವಳು ತಿರುಗಿಕೊಳ್ಳಲಿಲ್ಲ. ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಅದನ್ನು ನೋಡಿದಳು.
ಅವಳು ಇವುಗಳನ್ನೆಲ್ಲಾ ನಡೆಸಿದ ಮೇಲೆ ನನ್ನ ಬಳಿಗೆ ಪುನಃ ಬಂದಾಳು ಅಂದುಕೊಂಡೆನು. ಆದರೆ ಬರಲಿಲ್ಲ. ಆಗ ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ಇದನ್ನು ನೋಡಿದಳು.
8 ಆಗ ನಾನು ಕಂಡದ್ದೇನೆಂದರೆ, ಭ್ರಷ್ಟಳಾದ ಇಸ್ರಾಯೇಲು ವ್ಯಭಿಚಾರ ಮಾಡಿದ ಎಲ್ಲಾ ಕಾರಣಗಳ ನಿಮಿತ್ತ ನಾನು ಅವಳನ್ನು ಬಿಟ್ಟುಬಿಟ್ಟು, ತ್ಯಾಗ ಪತ್ರವನ್ನು ಕೊಟ್ಟಿದ್ದಾಗ್ಯೂ ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಭಯಪಡದೆ, ತಾನು ಕೂಡ ಹೋಗಿ ವೇಶ್ಯೆತನ ಮಾಡಿದಳು.
ಭ್ರಷ್ಟಳಾದ ಇಸ್ರಾಯೇಲ್ ನನಗೆ ವಿಮುಖಳಾಗಿ ವ್ಯಭಿಚಾರ ಮಾಡಿದ ಕಾರಣದಿಂದಲೇ ನಾನು ಅವಳನ್ನು ನಿರಾಕರಿಸಿ, ತ್ಯಾಗಪತ್ರ ಕೊಟ್ಟದ್ದನ್ನು ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ನೋಡಿಯೂ, ಅಂಜದೆಯೂ ತಾನೂ ಹೋಗಿ ವ್ಯಭಿಚಾರವನ್ನು ನಡೆಸಿದಳು.
9 ಆದದ್ದೇನೆಂದರೆ, ಅವಳ ಸೂಳೆತನದ ಸುದ್ದಿಯಿಂದ ಅವಳು ದೇಶವನ್ನು ಅಪವಿತ್ರ ಮಾಡಿ, ಕಲ್ಲುಗಳ ಮತ್ತು ಮರಗಳ ಸಂಗಡ ವ್ಯಭಿಚಾರ ಮಾಡಿದಳು.
ಕಲ್ಲು ಮರಗಳನ್ನು ಪೂಜಿಸಿ ವ್ಯಭಿಚಾರ ಮಾಡುವುದು ಲಘುವೆಂದು ಭಾವಿಸಿಕೊಂಡ ಆಕೆ ತನ್ನ ವ್ಯಭಿಚಾರದಿಂದ ದೇಶವನ್ನು ಅಪವಿತ್ರಪಡಿಸಿದಳು.
10 ಇದೆಲ್ಲಾ ಆದಾಗ್ಯೂ ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಪೂರ್ಣಹೃದಯದಿಂದಲ್ಲ, ಕಪಟದಿಂದಲೇ ನನ್ನ ಬಳಿಗೆ ತಿರುಗಿಕೊಂಡಿದ್ದಾಳೆ,” ಎಂದು ಯೆಹೋವ ದೇವರು ನುಡಿಯುತ್ತಾರೆ.
೧೦ಇಸ್ರಾಯೇಲಿಗೆ ಇಷ್ಟು ದಂಡನೆಯಾದರೂ ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ನನ್ನ ಕಡೆಗೆ ಪೂರ್ಣಮನದಿಂದಲ್ಲ, ಕಪಟದಿಂದಲೇ ನನ್ನ ಕಡೆ ತಿರುಗಿಕೊಂಡಿದ್ದಾಳೆ” ಎಂಬುದೇ ಯೆಹೋವನಾದ ನನ್ನ ನುಡಿ.
11 ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಭ್ರಷ್ಟಳಾದ ಇಸ್ರಾಯೇಲ್, ದ್ರೋಹಿಯಾದ ಯೆಹೂದಕ್ಕಿಂತಲೂ ಶಿಷ್ಟಳಾಗಿ ಕಂಡುಬಂದಿದ್ದಾಳೆ.
೧೧ಮತ್ತು ಯೆಹೋವನು ನನಗೆ ಹೀಗೆ ಹೇಳಿದನು, “ಭ್ರಷ್ಟಳಾದ ಇಸ್ರಾಯೇಲ್ ದ್ರೋಹಿಯಾದ ಯೆಹೂದಕ್ಕಿಂತಲೂ ಶಿಷ್ಟಳಾಗಿ ಕಂಡುಬಂದಿದ್ದಾಳೆ.
12 ನೀನು ಹೋಗಿ ಉತ್ತರ ದಿಕ್ಕಿಗೆ ಈ ಮಾತುಗಳನ್ನು ಸಾರು. “‘ಭ್ರಷ್ಟಳಾದ ಇಸ್ರಾಯೇಲೇ, ತಿರುಗಿಕೋ,’ ಎಂದು ಯೆಹೋವ ದೇವರು ಕರೆಯುತ್ತಾರೆ. ‘ನಾನು ನನ್ನ ಕೋಪವನ್ನು ನಿಮ್ಮ ಮೇಲೆ ಬೀಳ ಮಾಡುವುದಿಲ್ಲ. ಏಕೆಂದರೆ ನಾನು ಕರುಣಾಸಾಗರನು,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ನಾನು ಎಂದೆಂದಿಗೂ ಕೋಪವಿಟ್ಟುಕೊಳ್ಳುವುದಿಲ್ಲ.
೧೨ನೀನು ಹೋಗಿ ಉತ್ತರದಿಕ್ಕಿಗೆ ಈ ಮಾತುಗಳನ್ನು ಸಾರು, ‘ಯೆಹೋವನು ಹೀಗೆನ್ನುತ್ತಾನೆ, ಭ್ರಷ್ಟಳಾದ ಇಸ್ರಾಯೇಲೇ, ಹಿಂದಿರುಗು, ನಾನು ಕೋಪದ ಮುಖದಿಂದ ನಿನ್ನನ್ನು ನೋಡೆನು, ನಾನು ಕರುಣಾಶಾಲಿ, ನಿತ್ಯಕೋಪಿಯಲ್ಲ.
13 ನಿನ್ನ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಮಾಡಿ, ಒಂದೊಂದು ಹಸುರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯ ದೇವರುಗಳಿಗೆ ಚದರಿಸಿ, ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆ ಮಾಡು,’” ಎಂದು ಯೆಹೋವ ದೇವರು ಹೇಳುತ್ತಾರೆ.
೧೩ಇದೊಂದನ್ನು ಮಾಡು, ನೀನು ನೋಡಿದ ಕಡೆಯೆಲ್ಲಾ ತಿರುಗುತ್ತಾ, ಸೊಂಪಾಗಿ ಬೆಳೆದಿರುವ ಪ್ರತಿಯೊಂದು ಮರದ ಕೆಳಗೆ ಅನ್ಯರನ್ನು ಸೇರಿ, ನನ್ನ ಮಾತನ್ನು ಕೇಳದೆ, ನಿನ್ನ ದೇವರಾದ ಯೆಹೋವನೆಂಬ ನನಗೆ ದ್ರೋಹ ಮಾಡಿದ್ದಿ ಎಂಬುವುದನ್ನು ಒಪ್ಪಿಕೋ’ ಇದೇ ಯೆಹೋವನ ನುಡಿ.
14 “ಓ ಭ್ರಷ್ಟರಾದ ಜನರೇ, ತಿರುಗಿಕೊಳ್ಳಿರಿ,” ಎಂದು ಯೆಹೋವ ದೇವರು ನುಡಿಯುತ್ತಾರೆ. “ಏಕೆಂದರೆ, ನಾನು ನಿಮಗೆ ಪತಿ. ಪಟ್ಟಣದೊಳಗಿಂದ ಒಬ್ಬನನ್ನು, ಗೋತ್ರದೊಳಗಿಂದ ಇಬ್ಬರನ್ನು ತೆಗೆದುಕೊಂಡು, ಚೀಯೋನಿಗೆ ಕರೆದುಕೊಂಡು ಬರುವೆನು.
೧೪ಭ್ರಷ್ಟರಾದ ಮಕ್ಕಳೇ, ತಿರುಗಿಕೊಳ್ಳಿರಿ, ನಾನು ನಿಮಗೆ ಪತಿ. ಒಂದು ಪಟ್ಟಣಕ್ಕೆ ಒಬ್ಬನಂತೆಯೂ, ಗೋತ್ರಕ್ಕೆ ಇಬ್ಬರಂತೆಯೂ ಆರಿಸಿ ಚೀಯೋನಿಗೆ ಕರೆತರುವೆನು.
15 ನನ್ನ ಹೃದಯಕ್ಕೆ ಸರಿಯಾದ ಪಾಲಕರನ್ನು ನಿಮಗೆ ಕೊಡುವೆನು. ಅವರು ತಿಳುವಳಿಕೆಯಿಂದಲೂ, ಬುದ್ಧಿಯಿಂದಲೂ ನಿಮ್ಮನ್ನು ಪೋಷಿಸುವರು.
೧೫ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ದಯಪಾಲಿಸುವೆನು; ಅವರು ನಿಮ್ಮನ್ನು ಜ್ಞಾನ ಮತ್ತು ವಿವೇಕಗಳಿಂದ ಪೋಷಿಸುವರು.
16 ನೀವು ದೇಶದಲ್ಲಿ ಅಭಿವೃದ್ಧಿಯಾಗಿ ಫಲವುಳ್ಳವರಾದ ಮೇಲೆ ಆ ದಿವಸಗಳಲ್ಲಿ, ‘ಯೆಹೋವ ದೇವರ ಒಡಂಬಡಿಕೆಯ ಮಂಜೂಷವು,’ ಎಂದು ಇನ್ನು ಮೇಲೆ ಅವರು ಹೇಳದಿರುವರು. ಅದು ಮನಸ್ಸಿಗೆ ಬರುವುದಿಲ್ಲ, ಯಾರು ಅದನ್ನು ಸ್ಮರಿಸುವುದಿಲ್ಲ, ಅದರ ಬಗ್ಗೆ ವಿಚಾರಿಸುವುದೂ ಇಲ್ಲ; ಇನ್ನು ಮೇಲೆ ಸರಿಯಾಗುವುದಿಲ್ಲ ಎಂದು ಯೆಹೋವ ದೇವರು ನುಡಿಯುತ್ತಾರೆ.
೧೬ನೀವು ದೇಶದಲ್ಲಿ ಹೆಚ್ಚಿ ಅಭಿವೃದ್ಧಿಗೆ ಬಂದ ಕಾಲದಲ್ಲಿ, ‘ಯೆಹೋವನ ನಿಬಂಧನ ಮಂಜೂಷ’ ಇದರ ಪ್ರಸ್ತಾವವಿರದು. ಅದು ಜ್ಞಾಪಕಕ್ಕೆ ಬಾರದು, ಯಾರೂ ಸ್ಮರಿಸರು, ಅದು ಇಲ್ಲವಲ್ಲಾ ಎಂದು ದುಃಖಿಸರು, ಹೊಸದಾಗಿ ಕಲ್ಪಿಸಿಕೊಳ್ಳರು” ಇದು ಯೆಹೋವನ ನುಡಿ.
17 ಆ ಕಾಲ ಬಂದಾಗ ಯೆರೂಸಲೇಮನ್ನೇ, ‘ಯೆಹೋವ ದೇವರ ಸಿಂಹಾಸನ,’ ಎಂದು ಕರೆಯುವರು. ನನ್ನ ನಾಮ ಮಹತ್ವದ ಸ್ಥಾನವಾದ ಯೆರೂಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದು ಬರುವರು. ಆಮೇಲೆ ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು.
೧೭ಆ ಕಾಲದಲ್ಲಿ ಯೆರೂಸಲೇಮನ್ನು ಯೆಹೋವನ ಸಿಂಹಾಸನವೆಂದು ಕರೆಯುವರು; ಯೆಹೋವನ ನಾಮಮಹತ್ವದ ಸ್ಥಾನವಾದ ಯೆರೂಸಲೇಮಿಗೆ ಸಕಲ ಜನಾಂಗಗಳವರು ನೆರೆದು ಬರುವರು; ಅವರು ಇನ್ನು ಮೇಲೆ ತಮ್ಮ ದುಷ್ಟ ಹೃದಯದ ಹಟದಂತೆ ನಡೆಯರು.
18 ಆ ಕಾಲದಲ್ಲಿ ಯೆಹೂದದ ವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ಬಾಳುವುದು. ಈ ಎರಡು ವಂಶಗಳೂ ಉತ್ತರ ಪ್ರಾಂತಗಳನ್ನು ಬಿಟ್ಟು, ನಾನು ನಿಮ್ಮ ಪೂರ್ವಜರಿಗೆ ಬಾಧ್ಯವಾಗಿ ಕೊಟ್ಟ ನಾಡಿಗೆ ಬರುವುವು.”
೧೮ಆ ಕಾಲದಲ್ಲಿ ಯೆಹೂದ ವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ನಡೆಯುವುದು. ಎರಡೂ ಸೇರಿ ನಾನು ನಿಮ್ಮ ಪೂರ್ವಿಕರಿಗೆ ಬಾಧ್ಯವಾಗಿ ದಯಪಾಲಿಸಿದ ದೇಶಕ್ಕೆ ಉತ್ತರ ಸೀಮೆಯನ್ನು ಬಿಟ್ಟು ಬರುವವು.
19 ಯೆಹೋವ ದೇವರು ಹೇಳುವುದೇನೆಂದರೆ: “ಎಲೈ ಇಸ್ರಾಯೇಲ್, ನಾನು ಎಷ್ಟೋ ಸಂತೋಷದಿಂದ ನಿನ್ನನ್ನು ನನ್ನ ಪುತ್ರನೆಂದು ಭಾವಿಸಿ, ನಿನಗೆ ಮನೋಹರವಾದ ನಾಡನ್ನು ಎಂದರೆ, ಸಮಸ್ತ ರಾಷ್ಟ್ರಗಳಲ್ಲಿ ರಮಣೀಯವಾದ ಸೊತ್ತನ್ನು ಕೊಡಬೇಕು ಎಂದುಕೊಂಡಿದ್ದೆ. ನೀನು ನನ್ನನ್ನು, ‘ತಂದೆ,’ ಎಂದು ಸನ್ಮಾನಿಸಿ, ನನ್ನನ್ನು ತಪ್ಪದೆ ಹಿಂಬಾಲಿಸಿ ಬರುವೆ ಎಂದಿದ್ದೆ.
೧೯“ಇಸ್ರಾಯೇಲೇ, ನಾನು ಎಷ್ಟೋ ಸಂತೋಷದಿಂದ ಗಂಡು ಮಕ್ಕಳೊಳಗೆ ನಿನ್ನನ್ನೂ ಆರಿಸಿಕೊಂಡು, ನಿನಗೆ ಮನೋಹರವಾದ ದೇಶವನ್ನು ಅಂದರೆ ಸಮಸ್ತ ಜನಾಂಗಗಳ ಬಾಧ್ಯತೆಗಳಲ್ಲಿ ರಮಣೀಯವಾದದ್ದನ್ನು ಕೊಡುವೆನು; ನೀನು ನನ್ನ ಅನುಸರಣೆಯನ್ನು ಬಿಟ್ಟು ಓರೆಯಾಗದೆ ನನ್ನನ್ನು ‘ತಂದೆ’ ಎನ್ನುವಿ ಅಂದುಕೊಂಡೆನು.
20 ನಿಶ್ಚಯವಾಗಿ ಹೆಂಡತಿ ತನ್ನ ಗಂಡನನ್ನು ವಂಚಿಸಿಬಿಡುವ ಕಾರಣ, ಓ ಇಸ್ರಾಯೇಲಿನ ಮನೆತನದವರೇ, ನನಗೆ ವಂಚನೆ ಮಾಡಿದ್ದೀರಿ,” ಎಂದು ಯೆಹೋವ ದೇವರು ಹೇಳುತ್ತಾರೆ.
೨೦ಆದರೆ ಇಸ್ರಾಯೇಲ್ ವಂಶದವರೇ, ಒಬ್ಬ ಹೆಂಗಸು ಪತಿದ್ರೋಹ ಮಾಡಿದಂತೆ ನೀವು ನನಗೆ ದ್ರೋಹವನ್ನು ಮಾಡಿದ್ದೀರಿ” ಎಂದು ಯೆಹೋವನು ನುಡಿಯುತ್ತಾನೆ.
21 ಉನ್ನತ ಸ್ಥಳಗಳ ಮೇಲೆ ಸ್ವರವು ಕೇಳಿತು. ಅವು ಇಸ್ರಾಯೇಲಿನ ಮಕ್ಕಳ ಅಳುವಿಕೆಯ ಬೇಡಿಕೆಗಳೇ. ಏಕೆಂದರೆ ಅವರು ತಮ್ಮ ಮಾರ್ಗವನ್ನು ಡೊಂಕು ಮಾಡಿ, ತಮ್ಮ ದೇವರಾದ ಯೆಹೋವ ದೇವರನ್ನು ಮರೆತುಬಿಟ್ಟಿದ್ದರು.
೨೧ಆಹಾ, ಬೋಳುಗುಡ್ಡಗಳಲ್ಲಿ ಒಂದು ಶಬ್ದ! ತಾವು ಡೊಂಕು ದಾರಿಯನ್ನು ಹಿಡಿದು ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟಿದ್ದೇವೆಂದು ಇಸ್ರಾಯೇಲರು ಕಣ್ಣೀರು ಸುರಿಸಿ ದೇವರ ಕೃಪೆಯನ್ನು ಬೇಡುತ್ತಿದ್ದಾರಲ್ಲಾ.
22 “ಭ್ರಷ್ಟರಾದ ಮಕ್ಕಳೇ, ನೀವು ತಿರುಗಿಕೊಳ್ಳಿರಿ; ನಿಮ್ಮ ಭ್ರಷ್ಟತನವನ್ನು ನಾನು ಸ್ವಸ್ಥ ಮಾಡುವೆನು.” “ಇಗೋ, ನಿಮ್ಮ ಬಳಿಗೆ ಬರುತ್ತೇವೆ, ಏಕೆಂದರೆ ನೀವು ಯೆಹೋವ ದೇವರು, ನಮ್ಮ ದೇವರಾಗಿದ್ದೀರಿ.
೨೨“ಭ್ರಷ್ಟರಾದ ಮಕ್ಕಳೇ, ಹಿಂದಿರುಗಿರಿ, ನಿಮ್ಮ ಭ್ರಷ್ಟತ್ವವನ್ನು ಪರಿಹರಿಸುವೆನು” ಎಂದು ಯೆಹೋವನು ನುಡಿಯುತ್ತಾನೆ. ಅದಕ್ಕೆ ಜನರು, “ಇಗೋ, ನಿನ್ನ ಬಳಿಗೆ ಬಂದೆವು, ನೀನು ಯೆಹೋವನು, ನಮ್ಮ ದೇವರು.
23 ನಿಶ್ಚಯವಾಗಿ ಗುಡ್ಡಗಳಿಂದಲೂ, ಬೆಟ್ಟಗಳ ಸಮೂಹದಿಂದಲೂ ನಮಗೆ ಮೋಸವಾಗಿದೆ. ನಿಶ್ಚಯವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವ ದೇವರಲ್ಲಿಯೇ ಇದೆ.
೨೩ನಿಶ್ಚಯವಾಗಿ ಗುಡ್ಡಗಳಿಂದಲೂ ಬೆಟ್ಟಗಳ ಜಾತ್ರೆಯ ಗದ್ದಲದಿಂದಲೂ ಮೋಸವಾಯಿತು; ನಿಜನಿಜವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವನಲ್ಲಿ ನೆಲೆಗೊಂಡಿದೆ.
24 ನಾಚಿಕೆಯಾದದ್ದು, ನಮ್ಮ ಚಿಕ್ಕತನದಿಂದ ನಮ್ಮ ತಂದೆಗಳ ಕಷ್ಟವನ್ನೂ, ಅವರ ಕುರಿಗಳನ್ನೂ, ಅವರ ದನಗಳನ್ನೂ, ಅವರ ಪುತ್ರರನ್ನೂ, ಅವರ ಪುತ್ರಿಯರನ್ನೂ ತಿಂದುಬಿಟ್ಟಿದೆ.
೨೪ನಮ್ಮ ಪೂರ್ವಿಕರು ದುಡಿದದ್ದನ್ನೂ, ಅವರ ದನ ಮತ್ತು ಕುರಿಗಳನ್ನೂ ಅವರ ಗಂಡು, ಹೆಣ್ಣು ಮಕ್ಕಳನ್ನೂ ಬಾಳ್ ದೇವತೆಯು ನಮ್ಮ ಬಾಲ್ಯಾರಭ್ಯ ನುಂಗುತ್ತಾ ಬಂದಿದೆ.
25 ನಮ್ಮ ನಾಚಿಕೆಯಲ್ಲಿ ಮಲಗಿಕೊಳ್ಳುತ್ತೇವೆ. ನಮ್ಮ ಗಲಭೆ ನಮ್ಮನ್ನು ಮುಚ್ಚಿಕೊಳ್ಳುತ್ತದೆ. ಏಕೆಂದರೆ ನಾವೂ, ನಮ್ಮ ಪೂರ್ವಜರೂ ನಮ್ಮ ಚಿಕ್ಕತನದಿಂದ ಇಂದಿನವರೆಗೂ ನಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇವೆ. ನಮ್ಮ ಯೆಹೋವ ದೇವರ ಸ್ವರಕ್ಕೆ ಕಿವಿಗೊಡಲಿಲ್ಲ.”
೨೫ನಾವೇ ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ, ನಮ್ಮ ನಾಚಿಕೆಯು ನಮ್ಮನ್ನು ಮುಚ್ಚಿಬಿಡಲಿ. ನಾವು ಮತ್ತು ನಮ್ಮ ಪೂರ್ವಿಕರೂ ಬಾಲ್ಯದಿಂದ ಇಂದಿನವರೆಗೂ ನಮ್ಮ ದೇವರಾದ ಯೆಹೋವನಿಗೆ ಪಾಪಮಾಡುತ್ತಾ ಬಂದಿದ್ದೇವಷ್ಟೆ. ನಮ್ಮ ದೇವರಾದ ಯೆಹೋವನ ಮಾತನ್ನು ನಾವು ಕೇಳಲೇ ಇಲ್ಲ” ಎಂದು ಮೊರೆಯಿಡುತ್ತಾರೆ.

< ಯೆರೆಮೀಯನು 3 >