< ಯೆರೆಮೀಯನು 15 >

1 ಆಗ ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಮೋಶೆಯೂ ಸಮುಯೇಲನೂ ನನ್ನ ಮುಂದೆ ನಿಂತರೂ, ನನ್ನ ಮನಸ್ಸು ಈ ಜನರ ಮೇಲೆ ಇರುವುದಿಲ್ಲ. ಅವರನ್ನು ನನ್ನ ಸನ್ನಿಧಿಯಿಂದ ಕಳುಹಿಸಿಬಿಡು. ಅವರು ಹೋಗಲಿ. 2 ಅವರು ನಿನಗೆ, ‘ನಾವು ಎಲ್ಲಿ ಹೋಗಬೇಕು?’ ಎಂದು ಹೇಳಿದರೆ, ನೀನು ಅವರಿಗೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “‘ಮರಣಕ್ಕೆ ಇರುವವರು ಮರಣಕ್ಕೆ; ಖಡ್ಗಕ್ಕೆ ಇರುವವರು ಖಡ್ಗಕ್ಕೆ; ಕ್ಷಾಮಕ್ಕೆ ಇರುವವರು ಕ್ಷಾಮಕ್ಕೆ; ಸೆರೆಗೆ ಇರುವವರು ಸೆರೆಗೆ,’ ಎಂದು ಹೇಳಬೇಕು. 3 “ನಾನು ಅವರಿಗೆ ವಿರೋಧವಾಗಿ ನಾಲ್ಕು ವಿಧವಾದ ವಿನಾಶಗಳನ್ನು ಎಂದರೆ, ಕೊಲ್ಲುವುದಕ್ಕೆ ಖಡ್ಗವನ್ನೂ, ಹರಿಯುವುದಕ್ಕೆ ನಾಯಿಗಳನ್ನು, ನುಂಗುವುದಕ್ಕೂ ನಾಶಮಾಡುವುದಕ್ಕೂ ಆಕಾಶದ ಪಕ್ಷಿಗಳನ್ನೂ, ಕಾಡುಮೃಗಗಳನ್ನೂ ನೇಮಿಸುತ್ತೇನೆ ಎಂಬುದು ಯೆಹೋವ ದೇವರಾದ ನನ್ನ ಮಾತು. 4 ಅವರನ್ನು ಹಿಜ್ಕೀಯನ ಮಗನಾದ ಯೆಹೂದದ ಅರಸನಾದ ಮನಸ್ಸೆಯು ಯೆರೂಸಲೇಮಿನಲ್ಲಿ ನಡಿಸಿದ್ದಕ್ಕೆ ಪ್ರತಿಫಲವಾಗಿ ನಾನು ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಂತೆ ಮಾಡುವೆನು. 5 “ಯೆರೂಸಲೇಮೇ, ನಿನ್ನ ಮೇಲೆ ಯಾರು ಕನಿಕರಪಡುವರು, ನಿನಗೋಸ್ಕರ ಯಾರು ದುಃಖಿಸುವರು? ನಿನ್ನ ಕ್ಷೇಮವನ್ನು ಕುರಿತು ಕೇಳುವುದಕ್ಕೆ ಯಾರು ಹೋಗುವರು? 6 ನೀನು ನನ್ನನ್ನು ಬಿಟ್ಟುಬಿಟ್ಟಿದ್ದೀ,” ಎಂದು ಯೆಹೋವ ದೇವರು ಹೇಳುತ್ತಾರೆ. “ನೀನು ಹಿಂಜಾರಿದೆ. ಆದ್ದರಿಂದ ನನ್ನ ಕೈಯನ್ನು ನಿನಗೆ ವಿರೋಧವಾಗಿ ಚಾಚಿ, ನಿನ್ನನ್ನು ನಾಶಮಾಡುವೆನು. ನಿನಗೆ ಅನುಕಂಪ ತೋರಿಸುವುದರಲ್ಲಿ ದಣಿದಿದ್ದೇನೆ. 7 ಅವರನ್ನು ಮೊರದಿಂದ ದೇಶದ ಬಾಗಿಲುಗಳಲ್ಲಿ ಕವೆಗೋಲಿನಿಂದ ಹಾರಿಸಿ ತೂರುವೆನು. ನನ್ನ ಜನರನ್ನು ನಾಶಮಾಡಿ ಅವರಿಗೆ ಶೋಕವನ್ನು ನೀಡುವೆನು. ಅವರು ತಮ್ಮ ಮಾರ್ಗಗಳನ್ನು ಬಿಟ್ಟು, ಹಿಂದಿರುಗದೆ ಇದ್ದುದರಿಂದ 8 ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಕಿಗಿಂತ ಹೆಚ್ಚಾಗಿರುವರು, ಯುವಕರ ತಾಯಿಗಳ ಮೇಲೆ ನಾಶ ಮಾಡುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು, ಅವರ ಮೇಲೆ ಕಳವಳವನ್ನೂ, ದಿಗಿಲನ್ನೂ ತಟ್ಟನೆ ಬೀಳಿಸುವೆನು. 9 ಏಳುಮಂದಿಯನ್ನು ಹೆತ್ತವಳು ಕುಂದುತ್ತಾಳೆ. ತನ್ನ ಪ್ರಾಣವನ್ನು ಬಿಡುತ್ತಾಳೆ. ಹಗಲಿರುವಾಗಲೇ ಅವಳ ಸೂರ್ಯನು ಅಸ್ತಮಿಸುತ್ತಾನೆ. ಅವಳು ನಾಚಿಕೆಪಡುತ್ತಾಳೆ, ಅವಮಾನಗೊಳ್ಳುತ್ತಾಳೆ. ಇದಲ್ಲದೆ ಅವರ ಶೇಷವನ್ನು ಅವರ ಶತ್ರುಗಳ ಮುಂದೆ ಖಡ್ಗಕ್ಕೆ ಒಪ್ಪಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. 10 ನನ್ನ ತಾಯಿಯೇ, ನನಗೆ ಕಷ್ಟ! ನೀನು ನನ್ನನ್ನು ಭೂಮಿಯ ಮೇಲೆಲ್ಲಾ ವ್ಯಾಜ್ಯಗಾರನಾಗಿಯೂ, ತರ್ಕದವನಾಗಿಯೂ ಹೆತ್ತಿದ್ದೀಯಲ್ಲಾ? ನಾನು ಬಡ್ಡಿಗೆ ಸಾಲ ಕೊಡಲಿಲ್ಲ. ಆದರೂ ಅವರೆಲ್ಲರು ನನ್ನನ್ನು ಶಪಿಸುತ್ತಾರೆ. 11 ಇದಕ್ಕೆ ಯೆಹೋವ ದೇವರು, ನಿನಗೆ ಮೇಲಾಗುವಂತೆ ನಿಶ್ಚಯವಾಗಿ ನಿನ್ನನ್ನು ಬಿಡುಗಡೆಮಾಡುವೆನು. ನಿಜನಿಜವಾಗಿ ನಿನ್ನ ಶತ್ರುವನ್ನು ಕೇಡಿನಲ್ಲಿಯೂ, ಇಕ್ಕಟ್ಟಿನಲ್ಲಿಯೂ ನಿನಗೆ ಶರಣಾಗತನನ್ನಾಗಿ ಮಾಡುವೆನು. 12 ಕಬ್ಬಿಣವನ್ನು, ಬಡಗಣ ಕಬ್ಬಿಣವನ್ನು ಯಾರು ಮುರಿದಾರು? ಕಂಚನ್ನು ಮುರಿಯುವುದು ಯಾರಿಂದಾದೀತು? ಎಂದು ಹೇಳಿದನು. 13 ನಿನ್ನ ಸಕಲ ಪ್ರಾಂತಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿಮಿತ್ತ ನಾನು ನಿನ್ನ ಸೊತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡು ಮಾಡಿ, 14 ನಿನ್ನ ಶತ್ರುಗಳ ಕೈಗೆ ಕೊಟ್ಟು, ನಿನ್ನನ್ನು ಗೊತ್ತಿಲ್ಲದ ದೇಶಕ್ಕೆ ಸಾಗಿಸಿಬಿಡುವೆನು. ನನ್ನ ರೋಷದಿಂದ ಉರಿಯು ಹತ್ತಿಕೊಂಡಿದೆ, ಅದು ನಿಮ್ಮನ್ನು ಸುಟ್ಟುಬಿಡುವುದು. 15 ಅದಕ್ಕೆ ನಾನು ಯೆಹೋವ ದೇವರೇ, ನೀನೇ ಬಲ್ಲೆ, ನನಗಾಗಿ ನನ್ನ ಹಿಂಸಕರಿಗೆ ಮುಯ್ಯಿ ತೀರಿಸು, ಅವರಿಗೆ ಹೆಚ್ಚು ತಾಳ್ಮೆಯನ್ನು ತೋರಿಸಬೇಡ, ನನ್ನನ್ನು ನಿರ್ಮೂಲ ಮಾಡಬೇಡ ಏಕೆಂದರೆ ನೀವು ಕನಿಕರ ಉಳ್ಳವರು, ನಿನ್ನ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆನೆಂದು ಚಿತ್ತಕ್ಕೆ ತಂದುಕೋ. 16 ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರ ಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ, ಹೃದಯಾನಂದವೂ ಆದವು. ಸೇನಾಧೀಶ್ವರನಾದ ದೇವರೇ, ಯೆಹೋವ ದೇವರೇ, ನಾನು ನಿನ್ನ ಹೆಸರಿನವನಲ್ಲವೇ! 17 ನಾನು ವಿನೋದಗಾರರ ಕೂಟದಲ್ಲಿ ಕೂತುಕೊಳ್ಳಲಿಲ್ಲ, ಉಲ್ಲಾಸ ಪಡಲೂ ಇಲ್ಲ; ನೀವು ನನ್ನ ಮೇಲೆ ಕೈ ಇಟ್ಟಿದ್ದರಿಂದ ಒಂಟಿಗನಾಗಿ ಕೂತುಕೊಂಡೆನು; ನನ್ನನ್ನು ರೋಷದಿಂದ ತುಂಬಿಸಿದ್ದಿಯಷ್ಟೆ; 18 ಏಕೆ ನನ್ನ ವ್ಯಥೆಯು ನಿರಂತರವಾಗಿದೆ? ನನ್ನ ಗಾಯವು ಗಡುಸಾಗಿ ಗುಣ ಹೋಗಲೊಲ್ಲದೇಕೆ? ನೀನು ನನಗೆ ನೀರು ಬತ್ತುವ ಕಳ್ಳತೊರೆಯಂತಿರಬೇಕೋ? ಎಂದು ಅರಿಕೆಮಾಡಿಕೊಂಡೆನು. 19 ಆದಕಾರಣ ಯೆಹೋವ ದೇವರು ಹೀಗೆನ್ನುತ್ತಾರೆ: ನೀನು ಮಾನಸಾಂತರಪಟ್ಟರೆ, ನೀನು ನನಗೆ ಸೇವೆಮಾಡುವಂತೆ ನಾನು ನಿನ್ನನ್ನು ಪುನಃಸ್ಥಾಪಿಸುವೆನು. ನೀನು ತುಚ್ಛವಾದವುಗಳಿಗೆ ಬದಲಾಗಿ ಅಮೂಲ್ಯವಾದವುಗಳನ್ನೇ ಮಾತನಾಡುತ್ತಿದ್ದರೆ, ನೀನು ನನ್ನ ಬಾಯಿಯ ಹಾಗಿರುವೆ. ಅವರು ನಿನ್ನ ಕಡೆಗೆ ತಿರುಗಲಿ, ಆದರೆ ನೀನು ಅವರ ಕಡೆಗೆ ಹಿಂದಿರುಗಬೇಡ. 20 ಇದಲ್ಲದೆ ನಾನು ನಿನ್ನನ್ನು ಈ ಜನಕ್ಕೆ ಬಲವಾದ ಕಂಚಿನ ಗೋಡೆಯಾಗಿ ಮಾಡುತ್ತೇನೆ. ನಿನಗೆ ವಿರೋಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಜಯಿಸಲಾರರು. ಏಕೆಂದರೆ ನಾನೇ ನಿನ್ನನ್ನು ರಕ್ಷಿಸುವುದಕ್ಕೂ, ನಿನ್ನನ್ನು ತಪ್ಪಿಸುವುದಕ್ಕೂ ನಿನ್ನ ಸಂಗಡ ಇದ್ದೇನೆ, ಎಂದು ಯೆಹೋವ ದೇವರು ಹೇಳುತ್ತಾರೆ. 21 “ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ದುಷ್ಟರ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ.”

< ಯೆರೆಮೀಯನು 15 >