< ಹಬಕ್ಕೂಕನು 3 >

1 ಶಿಗ್ಯೋನೋತ ಸ್ವರದ ಮೇಲೆ ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ. 2 ಯೆಹೋವ ದೇವರೇ, ನಿಮ್ಮ ಕೀರ್ತಿಯನ್ನು ನಾನು ಕೇಳಿದ್ದೇನೆ, ಯೆಹೋವ ದೇವರೇ, ನಿಮ್ಮ ಕಾರ್ಯಗಳಿಗಾಗಿ ನಿಮ್ಮ ಮುಂದೆ ಭಯಭಕ್ತಿಯಿಂದ ನಿಲ್ಲುತ್ತೇನೆ. ನಮ್ಮ ದಿನಗಳಲ್ಲಿ ಅವುಗಳನ್ನು ಪುನಃ ಮಾಡಿರಿ. ನಮ್ಮ ವರ್ಷಗಳ ಮಧ್ಯದಲ್ಲಿ ಅವುಗಳನ್ನು ತಿಳಿಸಿರಿ, ನೀನು ರೋಷಗೊಂಡಿದ್ದರೂ ಕರುಣೆಯನ್ನು ಜ್ಞಾಪಕಮಾಡಿಕೊಳ್ಳಿರಿ. 3 ದೇವರು, ತೇಮಾನಿನಿಂದಲೂ; ಪರಿಶುದ್ಧರು, ಪಾರಾನ್ ಪರ್ವತದಿಂದಲೂ ಬಂದರು. ಅವರ ಮಹಿಮೆ ಆಕಾಶಗಳನ್ನು ಮುಚ್ಚಿತು. ಅವರ ಸ್ತೋತ್ರವು ಭೂಮಿಯನ್ನು ತುಂಬಿಸಿತು. 4 ಅವರ ತೇಜಸ್ಸು ಸೂರ್ಯೋದಯದ ಹಾಗಿತ್ತು. ಕಿರಣಗಳು ಅವರ ಹಸ್ತಗಳಿಂದ ಮಿಂಚಿದವು. ಅದರಲ್ಲಿ ಅವರ ಬಲ ಅಡಗಿತ್ತು. 5 ಅವರ ಮುಂದೆ ವ್ಯಾಧಿಯು ಹೋಯಿತು. ವ್ಯಾಧಿಯು ಅವನ ಹೆಜ್ಜೆಗಳನ್ನು ಅನುಸರಿಸಿತು. 6 ಅವರು ನಿಂತುಕೊಂಡು ಭೂಮಿಯನ್ನು ನಡುಗಿಸಿದರು. ಅವರು ನೋಡಿ ಜನಾಂಗಗಳನ್ನು ನಡುಗುವಂತೆ ಮಾಡಿದರು. ಪುರಾತನ ಪರ್ವತಗಳು ಸೀಳಿಹೋದವು. ಹಳೆಯ ಕಾಲದ ಗುಡ್ಡಗಳು ಬಿದ್ದು ಹೋದವು. ಅವರ ಮಾರ್ಗಗಳು ನಿತ್ಯವಾದವುಗಳೇ. 7 ಕೂಷಾನಿನ ಡೇರೆಗಳು ಕಷ್ಟದಲ್ಲಿರುವುದನ್ನು ಕಂಡೆನು. ಮಿದ್ಯಾನಿನ ನಿವಾಸಗಳು ವೇದನೆಯಿಂದ ನಡುಗಿದವು. 8 ಯೆಹೋವ ದೇವರೇ, ನದಿಗಳ ಮೇಲೆ ರೌದ್ರಗೊಂಡಿರುವಿರೋ? ಪ್ರವಾಹಗಳ ಮೇಲೆ ನಿಮ್ಮ ಕೋಪವಿತ್ತೋ? ನೀವು ಕುದುರೆಗಳನ್ನು ಮತ್ತು ರಥಗಳನ್ನು ಮುನ್ನಡೆಸಿದಾಗ ವಿಜಯಕ್ಕೆ ನೀವು ಸಮುದ್ರದ ಮೇಲೆ ಕೋಪಗೊಂಡಿದ್ದೀರಾ? 9 ನಿನ್ನ ಬಿಲ್ಲನ್ನು ಹೊರ ತೆಗೆದಿ, ಅನೇಕ ಬಾಣಗಳಿಗಾಗಿ ಕರೆ ಕೊಟ್ಟಿದ್ದಿ, ಭೂಮಿಯನ್ನು ನದಿಗಳಿಂದ ಸೀಳಿಬಿಡುವೆ. 10 ಬೆಟ್ಟಗಳು ನಿನ್ನನ್ನು ಕಂಡು ನಡುಗಿದವು; ಜಲಪ್ರವಾಹವು ಹಾದುಹೋಯಿತು; ಸಾಗರವು ಗರ್ಜಿಸಿ; ತನ್ನ ತೆರೆಗಳನ್ನು ಮೇಲಕ್ಕೆ ಎತ್ತುತ್ತದೆ. 11 ನಿನ್ನ ಹಾರುವ ಬಾಣಗಳ ಬೆಳಗಿಗೂ, ನಿನ್ನ ಮಿಂಚುವ ಈಟಿಯ ಹೊಳಪಿಗೂ ಸೂರ್ಯ ಚಂದ್ರರು ಆಕಾಶದಲ್ಲಿ ಸ್ಥಿರವಾಗಿದ್ದಾರೆ. 12 ನೀನು ಸಿಟ್ಟಿನಿಂದ ದೇಶದ ಮೇಲೆ ನಡೆದುಹೋಗಿ, ಕೋಪದಿಂದ ಜನಾಂಗಗಳನ್ನು ತುಳಿದು ಹಾಕಿದ್ದೀಯೆ. 13 ನಿನ್ನ ಜನರ ರಕ್ಷಣೆಗೋಸ್ಕರವೂ, ನಿನ್ನ ಅಭಿಷಿಕ್ತನ ರಕ್ಷಣೆಗೋಸ್ಕರವೂ ಹೊರಗೆ ಹೊರಟು ಬಂದಿ. ದುಷ್ಟ ದೇಶದ ನಾಯಕನನ್ನು ನೀನು ತುಳಿದುಬಿಟ್ಟಿ. ತಲೆಯಿಂದ ಪಾದದವರೆಗೆ ಅವನನ್ನು ಬೆತ್ತಲೆ ಮಾಡಿದಿ. 14 ನಮ್ಮನ್ನು ಚದುರಿಸಲು ಅವನ ಯುದ್ಧವೀರರು ಮುತ್ತಿಗೆ ಹಾಕಿದಾಗ, ಅವನ ಸ್ವಂತ ಭರ್ಜಿಯಿಂದಲೇ ಅವನ ತಲೆಯನ್ನು ತಿವಿದಿ. ಅವರು ಅಡಗಿಕೊಂಡಿರುವ ಬಡವರನ್ನು ನುಂಗಲು ಬಂದವರೋ ಎಂಬಂತೆ ಬಂದಿದ್ದರಲ್ಲವೇ? 15 ನೀನು ನಿನ್ನ ಕುದುರೆಗಳ ಸಂಗಡ ಸಮುದ್ರದಲ್ಲಿಯೂ, ಮಹಾಜಲಗಳ ಸಮೂಹದಲ್ಲಿಯೂ ನಡೆದು ಹೋದೆ. 16 ನಾನು ಕೇಳಿದಾಗ ನನ್ನ ಹೃದಯ ಬಡಿದುಕೊಂಡಿತು; ಆ ಶಬ್ದಕ್ಕೆ ನನ್ನ ತುಟಿಗಳು ಕದಲಿದವು; ನನ್ನ ಎಲುಬುಗಳು ಕ್ಷಯಗೊಂಡವು; ನನ್ನ ಕಾಲುಗಳು ನಡುಗಿದವು; ಆದರೂ ನಮ್ಮ ಮೇಲೆ ದಾಳಿಮಾಡುವ ಜನರ ಮೇಲೆ ನಾಶನ ಬರುವುದನ್ನು ನೋಡಲು ತಾಳ್ಮೆಯಿಂದ ಕಾದಿರುವೆನು. 17 ಅಂಜೂರದ ಗಿಡವು ಚಿಗುರದಿದ್ದರೂ, ದ್ರಾಕ್ಷಾಲತೆಗಳಲ್ಲಿ ಹಣ್ಣು ಫಲಿಸದಿದ್ದರೂ, ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ, ಹೊಲಗಳು ಆಹಾರ ಕೊಡದಿದ್ದರೂ, ಕುರಿಹಟ್ಟಿಗಳು ಬರಿದಾಗಿ ಹೋದರೂ, ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ, 18 ನಾನು ಯೆಹೋವ ದೇವರಲ್ಲಿ ಉಲ್ಲಾಸಿಸುವೆನು. ನನ್ನ ರಕ್ಷಕರಾದ ದೇವರಲ್ಲಿ ಆನಂದಿಸುವೆನು. 19 ಸಾರ್ವಭೌಮ ಯೆಹೋವ ದೇವರು ನನ್ನ ಬಲವು. ಅವರು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳ ಹಾಗೆ ಮಾಡಿ, ನನ್ನ, ಉನ್ನತ ಸ್ಥಳಗಳಲ್ಲಿ ನನ್ನನ್ನು ನಡೆಯುವಂತೆ ಮಾಡುತ್ತಾನೆ.

< ಹಬಕ್ಕೂಕನು 3 >