< ಸಮುವೇಲನು - ದ್ವಿತೀಯ ಭಾಗ 14 >

1 ಅರಸನಾದ ದಾವೀದನ ಹೃದಯವು ಅಬ್ಷಾಲೋಮನ ಕಡೆಗೆ ಇರುವುದನ್ನು ಚೆರೂಯಳ ಮಗ ಯೋವಾಬನಿಗೆ ತಿಳಿಯಿತು.
ಅರಸನು ಅಬ್ಷಾಲೋಮನಿಗಾಗಿ ಹಂಬಲಿಸುತ್ತಿರುವುದನ್ನು ಚೆರೂಯಳ ಮಗನಾದ ಯೋವಾಬನು ತಿಳಿದು
2 ಆದುದರಿಂದ ಯೋವಾಬನು ತೆಕೋವಗೆ ಮನುಷ್ಯರನ್ನು ಕಳುಹಿಸಿ, ಅಲ್ಲಿಂದ ಒಬ್ಬ ಜ್ಞಾನವುಳ್ಳ ಸ್ತ್ರೀಯನ್ನು ಕರಿಸಿ ಅವಳಿಗೆ, “ನೀನು ಗೋಳಾಡುವವಳ ಹಾಗೆ ನಟಿಸಿ, ದುಃಖ ವಸ್ತ್ರಗಳನ್ನು ಧರಿಸಿಕೋ; ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳದೆ, ಸತ್ತವನಿಗೋಸ್ಕರ ಅನೇಕ ದಿವಸಗಳಿಂದ ದುಃಖಿಸುವವಳ ಹಾಗಿದ್ದು,
ತೆಕೋವ ಪಟ್ಟಣದಿಂದ ಒಬ್ಬ ಬುದ್ಧಿವಂತೆಯಾದ ಸ್ತ್ರೀಯನ್ನು ಕರೆದುಕೊಂಡು ಬರಲು ತಿಳಿಸಿದನು. ಅವನು ಆಕೆಗೆ, “ನೀನು ಪ್ರಿಯರನ್ನು ಕಳೆದುಕೊಂಡು ಬಹು ದಿನಗಳಿಂದ ಶೋಕಪಡುತ್ತಿರುವ ಸ್ತ್ರೀಯೋ ಎಂಬಂತೆ ಶೋಕವಸ್ತ್ರಗಳನ್ನು ಧರಿಸಿಕೊಂಡು ಎಣ್ಣೆಹಚ್ಚಿಕೊಳ್ಳದೆ,
3 ಅರಸನ ಬಳಿಗೆ ಹೋಗಿ ಅವನ ಸಂಗಡ ಈ ಪ್ರಕಾರ ಮಾತನಾಡು,” ಎಂದು ಹೇಳಿ ಯೋವಾಬನು ಅವಳಿಗೆ ಕಲಿಸಿಕೊಟ್ಟನು.
ಅರಸನ ಬಳಿಗೆ ಹೋಗಿ ಈ ಮಾತುಗಳನ್ನು ಅವನಿಗೆ ಹೇಳು” ಎಂದು ಆಜ್ಞಾಪಿಸಿ, ಹೇಳಬೇಕಾದ ಮಾತುಗಳನ್ನು ಆಕೆಗೆ ಕಲಿಸಿಕೊಟ್ಟನು.
4 ಹಾಗೆಯೇ ತೆಕೋವದ ಆ ಸ್ತ್ರೀಯು ಅರಸನ ಸಂಗಡ ಮಾತನಾಡಿದಳು. ಮೋರೆ ಕೆಳಗಾಗಿ ನೆಲಕ್ಕೆ ಬಿದ್ದು ವಂದಿಸಿ, “ಅರಸನೇ, ಸಹಾಯಮಾಡು,” ಎಂದಳು.
ತೆಕೋವದ ಸ್ತ್ರೀಯು ಅರಸನ ಹತ್ತಿರ ಹೋಗಿ ಅವನ ಮುಂದೆ ನೆಲಕ್ಕೆ ಬಿದ್ದು, “ಅರಸನೇ ರಕ್ಷಿಸು” ಎಂದು ಕೂಗಿದಳು.
5 ಅರಸನು ಅವಳಿಗೆ, “ನಿನಗೆ ಏನಾಯಿತು?” ಎಂದನು. ಅದಕ್ಕವಳು, “ನಾನು ನಿಶ್ಚಯವಾಗಿ ವಿಧವೆಯಾದ ಸ್ತ್ರೀಯು. ನನ್ನ ಗಂಡನು ಸತ್ತುಹೋಗಿದ್ದಾನೆ.
ಅರಸನು, “ನಿನಗೇನಾಯಿತು?” ಎಂದು ಆಕೆಯನ್ನು ಕೇಳಲು ಆಕೆಯು,
6 ಆದರೆ ನಿನ್ನ ಸೇವಕಳಿಗೆ ಇಬ್ಬರು ಪುತ್ರರಿದ್ದರು. ಅವರಿಬ್ಬರೂ ಹೊಲದಲ್ಲಿ ಹೊಡೆದಾಡಿದರು. ಅವರನ್ನು ಬಿಡಿಸುವವರು ಯಾರೂ ಇಲ್ಲದ್ದರಿಂದ, ಒಬ್ಬನು ಮತ್ತೊಬ್ಬನನ್ನು ಹೊಡೆದು ಕೊಂದುಹಾಕಿದನು.
“ನಾನು ವಿಧವೆ, ಗಂಡನು ಸತ್ತು ಹೋಗಿದ್ದಾನೆ. ನಿನ್ನ ದಾಸಿಯಾದ ನನಗೆ ಇಬ್ಬರು ಮಕ್ಕಳಿದ್ದರು. ಒಂದು ದಿನ ಅವರಿಬ್ಬರೂ ಹೊಲದಲ್ಲಿ ಜಗಳವಾಡಿದರು. ಅಲ್ಲಿ ಬಿಡಿಸುವವರು ಯಾರೂ ಇರಲಿಲ್ಲವಾದ್ದರಿಂದ ಒಬ್ಬನು ಇನ್ನೊಬ್ಬನನ್ನು ಹೊಡೆದು ಕೊಂದನು.
7 ಆದ್ದರಿಂದ ಕುಟುಂಬದವರೆಲ್ಲರು ನಿನ್ನ ಸೇವಕಿಯ ವಿರೋಧವಾಗಿ ಎದ್ದು, ‘ತನ್ನ ಸಹೋದರನನ್ನು ಕೊಂದವನನ್ನು ಅವನ ಸಹೋದರನ ಪ್ರಾಣಕ್ಕೋಸ್ಕರ ಅವನನ್ನು ಒಪ್ಪಿಸಿಕೊಡು, ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನೂ ತೆಗೆದುಬಿಟ್ಟು ನಿನ್ನನ್ನು ಬಾಧ್ಯಸ್ಥವಿಲ್ಲದ ಹಾಗೆ ಮಾಡಿಬಿಡುತ್ತೇವೆ’ ಎನ್ನುತ್ತಾರೆ. ಹೀಗೆಯೇ ಅವರು ನನಗೆ ಉಳಿದಿರುವ ಒಂದು ಕೆಂಡವನ್ನು ಆರಿಸಿ, ಭೂಮಿಯ ಮೇಲೆ ನನ್ನ ಗಂಡನ ಹೆಸರನ್ನೂ, ಸಂತಾನವನ್ನೂ ಅಳಿಸಬೇಕೆಂದಿದ್ದಾರೆ,” ಎಂದಳು.
ಈಗ ನೋಡು ಬಳಗದವರೆಲ್ಲರು ನಿನ್ನ ದಾಸಿಯಾದ ನನಗೆ ವಿರೋಧವಾಗಿ ಎದ್ದು ‘ತಮ್ಮನನ್ನು ಕೊಂದವನೆಲ್ಲಿ?, ಅವನನ್ನು ನಮಗೆ ಒಪ್ಪಿಸು. ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನೂ ತೆಗೆದುಬಿಟ್ಟು ನಿನ್ನನ್ನು ಬಾಧ್ಯಸ್ಥನಿಲ್ಲದ ಹಾಗೆ ಮಾಡಿಬಿಡುತ್ತೇವೆ’ ಅನ್ನುತ್ತಾರೆ. ಹೀಗೆ ಅವರು ನನಗುಳಿದಿರುವ ಒಂದು ಕೆಂಡವನ್ನೂ ಆರಿಸಿಬಿಟ್ಟು, ನನ್ನ ಗಂಡನ ಹೆಸರನ್ನೂ, ಸಂತಾನವನ್ನೂ ಭೂಲೋಕದ ಮೇಲಿನಿಂದ ಅಳಿಸಬೇಕೆಂದಿದ್ದಾರೆ” ಎಂದು ಉತ್ತರ ಕೊಟ್ಟಳು.
8 ಆಗ ಅರಸನು ಆ ಸ್ತ್ರೀಗೆ, “ನೀನು ನಿನ್ನ ಮನೆಗೆ ಹೋಗು; ನಾನು ನಿನ್ನ ವಿಷಯವಾಗಿ ಆಜ್ಞಾಪಿಸುತ್ತೇನೆ,” ಎಂದನು.
ಆಗ ಅರಸನು, “ನೀನು ಮನೆಗೆ ಹೋಗು, ನಿನ್ನ ವಿಷಯದಲ್ಲಿ ಆಜ್ಞಾಪಿಸುತ್ತೇನೆ” ಎಂದು ಹೇಳಿದನು.
9 ಆದರೆ ತೆಕೋವದ ಸ್ತ್ರೀಯು ಅರಸನಿಗೆ, “ಅರಸನಾದ ನನ್ನ ಒಡೆಯನೇ, ಆ ಅಕ್ರಮವು ನನ್ನ ಮೇಲೆಯೂ, ನನ್ನ ತಂದೆಯ ಮನೆಯ ಮೇಲೆಯೂ ಇರಲಿ. ಅರಸನೂ, ಅವನ ಸಿಂಹಾಸನವೂ ನಿರಪರಾಧವಾಗಿರಲಿ,” ಎಂದಳು.
ಆ ತೆಕೋವದ ಸ್ತ್ರೀಯು, “ಅರಸನೇ, ಒಡೆಯನೇ ಅಪರಾಧವು ನನ್ನ ಮೇಲೆಯೂ, ನನ್ನ ಕುಟುಂಬದ ಮೇಲೆಯು ಇರಲಿ. ಅರಸನಿಗೂ ಅವನ ಸಿಂಹಾಸನಕ್ಕೂ ದೋಷ ಹತ್ತದಿರಲಿ” ಎಂದಳು.
10 ಅದಕ್ಕೆ ಅರಸನು, “ಯಾವನಾದರೂ ನಿನಗೆ ಏನಾದರೂ ಹೇಳಿದರೆ, ಅವನನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಅವನು ಇನ್ನು ನಿನ್ನನ್ನು ಎಂದಿಗೂ ಮುಟ್ಟದೆ ಇರುವನು,” ಎಂದನು.
೧೦ಅರಸನು ಆಕೆಗೆ, “ಹಾಗೆ ಅಂದವರನ್ನು ನನ್ನ ಬಳಿಗೆ ಕರೆದುಕೊಂಡು ಬಾ, ಅವರು ನಿನ್ನನ್ನು ಮುಟ್ಟದಂತೆ ಮಾಡುತ್ತೇನೆ” ಎಂದನು.
11 ಆಕೆ, “ಹಾಗಾದರೆ ನನ್ನ ಮಗನು ಸಾಯದಂತೆ ನಾಶನಕ್ಕೆ ನಾಶನವನ್ನು ಕೂಡಿಸುವ ಸೇಡುತೀರಿಸುವವರನ್ನು ತಡೆಯಲು ಅರಸನು ತನ್ನ ದೇವರಾದ ಯೆಹೋವ ದೇವರನ್ನು ಬೇಡಿಕೊಳ್ಳಲಿ,” ಎಂದಳು. ಅದಕ್ಕೆ ದಾವೀದನು, “ಯೆಹೋವ ದೇವರ ಜೀವದಾಣೆ, ನಿನ್ನ ಮಗನ ತಲೆಯ ಕೂದಲಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ,” ಎಂದನು.
೧೧ಆಗ ಆ ಸ್ತ್ರೀಯು, “ಸಮೀಪ ಬಂಧುವು ನನ್ನ ಎರಡನೆಯ ಮಗನನ್ನು ಕೊಂದು ನನ್ನನ್ನು ಪೂರ್ಣವಾಗಿ ನಾಶಮಾಡದಂತೆ ಅರಸನು ತಾನಾಗಿ ನೋಡಿಕೊಳ್ಳುವನೆಂಬುದಾಗಿ ನನ್ನ ದೇವರಾದ ಯೆಹೋವನ ಮೇಲೆ ಆಣೆಯಿಟ್ಟು ಪ್ರಮಾಣಮಾಡಬೇಕು” ಎಂದು ಬೇಡಿಕೊಂಡಳು. ಅದಕ್ಕೆ ಅರಸನು, “ಯೆಹೋವನಾಣೆ, ನಿನ್ನ ಮಗನ ಕೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಗೊಡಿಸುವುದಿಲ್ಲ” ಎಂದು ಹೇಳಿದನು.
12 ಆಗ ಆ ಸ್ತ್ರೀಯು, “ಅರಸನಾದ ನನ್ನ ಒಡೆಯನ ಸಂಗಡ ನಿನ್ನ ದಾಸಿಯು ಒಂದು ಮಾತನ್ನು ಹೇಳುವುದಕ್ಕೆ ಅಪ್ಪಣೆ ಆಗಬೇಕು,” ಎಂದಳು. ಆಗ ಅವನು, “ಹೇಳು,” ಎಂದನು.
೧೨ಆಗ ಸ್ತ್ರೀಯು, “ನನ್ನ ಒಡೆಯನೇ, ಇನ್ನೊಂದು ಮಾತನ್ನು ಹೇಳಿಕೊಳ್ಳುವುದಕ್ಕೆ ಅಪ್ಪಣೆಯಾಗಲಿ” ಅನ್ನಲು ಅರಸನು, “ಹೇಳು” ಎಂದನು.
13 ಆಗ ಆ ಸ್ತ್ರೀಯು, “ಹಾಗಾದರೆ, ಏಕೆ ದೇವಜನರಿಗೆ ವಿರೋಧವಾಗಿ ಅಂಥಾ ಕಾರ್ಯವನ್ನು ನೀನು ನಡೆಸುವುದೇನು? ಅರಸನು ತಾನು ಬಹಿಷ್ಕರಿಸಿದ ಮಗನನ್ನು ತಿರುಗಿ ಸೇರಿಸಿಕೊಳ್ಳದೆ ಹೋದದ್ದರಿಂದ, ತನ್ನನ್ನು ತಾನೇ ಅಪರಾಧಿ ಎಂದು ತೀರ್ಪುಮಾಡಿದ ಹಾಗಾಯಿತು.
೧೩ಆಕೆಯು, “ಅರಸನು ಈ ತೀರ್ಪು ಕೊಟ್ಟಿದ್ದರಿಂದ ತನ್ನನ್ನು ತಾನೇ ಅಪರಾಧಿ ಎಂದು ನಿರ್ಣಯಿಸಿದ ಹಾಗಾಯಿತು. ಅವನು ತಳ್ಳಲ್ಪಟ್ಟ ಮಗನನ್ನು ಸೇರಿಸಿಕೊಳ್ಳದೆ ಹೋಗುವುದರಿಂದ ದೇವಪ್ರಜೆಗೆ ವಿರೋಧವಾಗಿ ಆಲೋಚನೆ ಮಾಡಿದ ಹಾಗಾಯಿತು. ಅರಸನು ಹೀಗೇಕೆ ಮಾಡಬೇಕು?
14 ನಾವೆಲ್ಲರೂ ಸಾಯುವುದು ಅವಶ್ಯವೇ. ನಾವು ನೆಲದ ಮೇಲೆ ಚೆಲ್ಲಿ ತಿರುಗಿ ತುಂಬಿಕೊಳ್ಳಲಾಗದ ನೀರಿನ ಹಾಗೆ ಇದ್ದೇವೆ. ಆದರೆ ದೇವರು ಹಾಗೆ ಯಾರ ಪ್ರಾಣವನ್ನೂ ತೆಗೆಯ ಬಯಸುವವರಲ್ಲ. ಅದಕ್ಕೆ ಬದಲಾಗಿ ಬಹಿಷ್ಕಾರವಾದವವರನ್ನು ತಿರುಗಿ ತಮ್ಮ ಬಳಿಗೆ ಬರುವಂತೆ ದೇವರು ಸದುಪಾಯಗಳನ್ನು ಕಲ್ಪಿಸುವವರಾಗಿದ್ದಾರೆ.
೧೪ನಾವು ಸಾಯುವವರು. ನೆಲದ ಮೇಲೆ ಚೆಲ್ಲಿದ ನೀರು ಪುನಃ ತೆಗೆದುಕೊಳ್ಳಲು ಆಗದಂತೆ ಇರುವ ನೀರಿನಂತೆ ನಾವು. ಮನುಷ್ಯರ ಪ್ರಾಣವನ್ನು ತೆಗೆಯುವುದಕ್ಕೆ ದೇವರಿಗೆ ಇಷ್ಟವಿಲ್ಲ. ತಳ್ಳಲ್ಪಟ್ಟವನು ತಿರುಗಿ ತನ್ನ ಬಳಿಗೆ ಬರುವ ಹಾಗೆ ಆತನು ಸದುಪಾಯಗಳನ್ನು ಕಲ್ಪಿಸುವವನಾಗಿರುತ್ತಾನೆ.
15 “ಆದ್ದರಿಂದ ಈಗ ಜನರು ನನ್ನನ್ನು ಭಯಪಡಿಸಿದ್ದರಿಂದ, ಈ ಕಾರ್ಯವನ್ನು ಕುರಿತು ನನ್ನ ಒಡೆಯನಾದ ಅರಸನ ಸಂಗಡ ನಿನ್ನ ದಾಸಿಯಾದ ನಾನು ಮಾತಾನಾಡುವುದಕ್ಕೆ ಬಂದೆನು. ‘ನಿನ್ನ ದಾಸಿಯಾದ ನಾನು ಅರಸನ ಬಳಿಗೆ ಹೋಗುತ್ತೇನೆ. ಒಂದು ವೇಳೆ ಅರಸನು ತನ್ನ ದಾಸಿಯ ಕಾರ್ಯವನ್ನು ನೆರವೇರಿಸಿಯಾನು.
೧೫ಅದಿರಲಿ ಜನರು ನಿನ್ನ ಸೇವಕಿಯಾದ ನನ್ನನ್ನು ಹೆದರಿಸಿದ್ದರಿಂದ, ‘ನಾನು ಈ ಸಂಗತಿಯನ್ನು ಅರಸನಿಗೆ ತಿಳಿಸಿದರೆ, ತನ್ನ ಸೇವಕಿಯ ಬಿನ್ನಹವನ್ನು ಲಾಲಿಸಬಹುದು ಎಂದುಕೊಂಡು ನನ್ನ ಒಡೆಯನಾದ ಅರಸನಿಗೆ ಇದನ್ನು ತಿಳಿಸುವುದಕ್ಕೆ ಬಂದೆನು ಎಂದಳು.
16 ಏಕೆಂದರೆ ಅರಸನು ಕೇಳಿ ನನ್ನನ್ನೂ, ನನ್ನ ಮಗನನ್ನೂ ದೇವರ ಬಾಧ್ಯತೆಯಲ್ಲಿಂದ ನಾಶಮಾಡಬೇಕೆಂದಿರುವ ಮನುಷ್ಯರ ಕೈಯಿಂದ ದಾಸಿಯನ್ನು ತಪ್ಪಿಸುವನು,’ ಎಂದುಕೊಂಡೆನು.
೧೬ಅರಸನು ತನ್ನ ಸೇವಕಿಯಾದ ನನ್ನ ಬಿನ್ನಹವನ್ನು ಲಾಲಿಸಿ ನನ್ನನ್ನೂ, ನನ್ನ ಮಗನನ್ನೂ ದೇವರ ಸ್ವತ್ತಿನಿಂದ ತೆಗೆದುಹಾಕಬೇಕೆಂದಿರುವವರ ಕೈಗೆ ಸಿಕ್ಕದಂತೆ ತಪ್ಪಿಸಿ ರಕ್ಷಿಸುವನೆಂದು ನಂಬಿಕೊಂಡಿದ್ದೇನೆ.’
17 “ನಿನ್ನ ದಾಸಿಯು, ‘ಅರಸನಾದ ನನ್ನ ಒಡೆಯನ ಮಾತು ಆದರಣೆಯಾಗಿರಲಿ. ಏಕೆಂದರೆ ಒಳ್ಳೆಯದನ್ನೂ, ಕೆಟ್ಟದ್ದನ್ನೂ ಕೇಳುವುದಕ್ಕೆ ಅರಸನಾದ ನನ್ನ ಒಡೆಯನು ದೇವದೂತನ ಹಾಗೆ ಇದ್ದಾನೆ ಮತ್ತು ನಿನ್ನ ದೇವರಾದ ಯೆಹೋವ ದೇವರು ನಿನ್ನ ಸಂಗಡ ಇರಲಿ,’ ಎಂದಳು.”
೧೭ನನ್ನ ಒಡೆಯನಾದ ಅರಸನ ಮಾತು ಸಮಾಧಾನಕ್ಕೆ ಕಾರಣವಾಗುವುದೆಂದು ನೆನಸಿ ನಿನ್ನ ದಾಸಿಯಾದ ನಾನು ಬಂದೆನು. ನ್ಯಾಯ ಅನ್ಯಾಯಗಳನ್ನು ಕಂಡುಹಿಡಿಯುವುದರಲ್ಲಿ ನನ್ನ ಒಡೆಯನಾದ ಅರಸನು ದೇವದೂತನಂತಿದ್ದಾನೆ. ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರಲಿ” ಎಂದಳು.
18 ಆಗ ಅರಸನು ಉತ್ತರವಾಗಿ ಆ ಸ್ತ್ರೀಗೆ, “ನಾನು ನಿನ್ನಿಂದ ಕೇಳುವುದನ್ನು ನನಗೆ ಮರೆಮಾಡಬೇಡ,” ಎಂದನು. ಅದಕ್ಕವಳು, “ಅರಸನಾದ ನನ್ನ ಒಡೆಯನು ಮಾತನಾಡಲಿ,” ಎಂದಳು.
೧೮ಆಗ ಅರಸನು ಆ ಸ್ತ್ರೀಗೆ, “ನಾನು ನಿನ್ನನ್ನು ಒಂದು ಮಾತು ಕೇಳಬೇಕೆಂದಿರುತ್ತೇನೆ. ನೀನು ಅದನ್ನು ಮರೆಮಾಚದೆ ತಿಳಿಸಬೇಕು” ಎಂದನು. ಆಗ ಆಕೆಯು, “ಅರಸನ ಅಪ್ಪಣೆಯಾಗಲಿ” ಎಂದು ಉತ್ತರಕೊಟ್ಟಳು.
19 ಅದಕ್ಕೆ ಅರಸನು, “ಇದೆಲ್ಲಾದರಲ್ಲಿ ಯೋವಾಬನ ಕೈ ನಿನ್ನ ಸಂಗಡ ಉಂಟಲ್ಲವೋ?” ಎಂದು ಕೇಳಿದನು. ಆ ಸ್ತ್ರೀಯು ಉತ್ತರವಾಗಿ, “ನಿನ್ನ ಜೀವದಾಣೆ, ಅರಸನಾದ ನನ್ನ ಒಡೆಯನೇ, ನೀನು ಒಂದು ಮಾತು ಹೇಳಿದರೆ, ನಾವು ಅದನ್ನು ಬಿಟ್ಟು ಎಡಕ್ಕಾದರೂ, ಬಲಕ್ಕಾದರೂ ಜಾರಿಕೊಳ್ಳುವುದಕ್ಕೆ ಆಗುವುದಿಲ್ಲ; ಏಕೆಂದರೆ ನಿನ್ನ ಸೇವಕನಾದ ಯೋವಾಬನು ನನಗೆ ಆಜ್ಞಾಪಿಸಿ, ಈ ಎಲ್ಲಾ ಮಾತುಗಳನ್ನು ನಿನ್ನ ಸೇವಕಳಿಗೆ ಹೇಳಿಕೊಟ್ಟನು.
೧೯ಅರಸನು, “ಈ ಕಾರ್ಯದಲ್ಲಿ ಯೋವಾಬನ ಕೈವಾಡ ಇದೆಯೇ?” ಎಂದು ಕೇಳಿದನು. ಅದಕ್ಕೆ ಆ ಸ್ತ್ರೀಯು, “ಅರಸನ ಜೀವದಾಣೆ, ಅರಸನು ಒಂದು ಮಾತು ಹೇಳಿದರೆ ನಾವು ತಪ್ಪಿಸಿಕೊಂಡು ಎಡಕ್ಕಾಗಲಿ, ಬಲಕ್ಕಾಗಲಿ ಜಾರಿಕೊಳ್ಳುವುದಕ್ಕೆ ಆಗುವುದಿಲ್ಲ. ನಿನ್ನ ದಾಸಿಯಾದ ನನ್ನನ್ನು ಪ್ರೇರೇಪಿಸಿ, ಈ ಎಲ್ಲಾ ಮಾತುಗಳನ್ನು ನನಗೆ ಕಲಿಸಿ ಕೊಟ್ಟವನು ನಿನ್ನ ಸೇವಕನಾದ ಯೋವಾಬನೇ ಹೌದು.
20 ಈ ಮಾತನ್ನು ರೂಪಕವಾಗಿ ತಿರುಗಿಸುವುದಕ್ಕೆ ನಿನ್ನ ಸೇವಕನಾದ ಯೋವಾಬನು ಇದನ್ನು ಮಾಡಿದ್ದಾನೆ. ಆದರೆ ಭೂಮಿಯಲ್ಲಿ ನಡೆಯುವುದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ದೇವದೂತನ ಜ್ಞಾನದ ಹಾಗೆಯೇ ನನ್ನ ಒಡೆಯನು ಜ್ಞಾನವುಳ್ಳವನಾಗಿದ್ದಾನೆ,” ಎಂದಳು.
೨೦ಅಬ್ಷಾಲೋಮನು ನಡೆದಿರುವ ಘಟನೆಯಿಂದ ಅರಸನು ಕೋಪಗೊಳ್ಳದೆ ಇರುವಂತೆ ವಿಷಯವನ್ನು ಈ ರೀತಿ ಹೇಳುವಂತೆ ನಿನ್ನ ಸೇವಕನಾದ ಯೋವಾಬನೇ ಇದನ್ನು ಕಲಿಸಿದನು. ಆದರೆ ನನ್ನ ಒಡೆಯನು ದೇವದೂತನಂಥ ಜ್ಞಾನಿ. ಅವನು ಭೂಲೋಕದಲ್ಲಿ ನಡೆಯುವುದನ್ನೆಲ್ಲಾ ತಿಳಿದುಕೊಳ್ಳುವನು” ಎಂದು ಉತ್ತರಕೊಟ್ಟಳು.
21 ಆದ್ದರಿಂದ ಅರಸನು ಯೋವಾಬನಿಗೆ, “ನಾನು ಈ ಕಾರ್ಯವನ್ನು ಮಾಡಿದೆನು. ನೀನು ಹೋಗಿ ಯೌವನಸ್ಥನಾದ ಅಬ್ಷಾಲೋಮನನ್ನು ತಿರುಗಿ ಕರೆದುಕೊಂಡು ಬಾ,” ಎಂದನು.
೨೧ಅನಂತರ ಅರಸನು ಯೋವಾಬನಿಗೆ, “ನೀನು ಕೇಳಿಕೊಂಡದ್ದನ್ನು ಅನುಗ್ರಹಿಸಿದ್ದೇನೆ, ಹೋಗಿ ಯೌವನಸ್ಥನಾದ ಅಬ್ಷಾಲೋಮನನ್ನು ಕರೆದುಕೊಂಡು ಬಾ” ಅಂದನು.
22 ಆಗ ಯೋವಾಬನು ಮೋರೆ ಕೆಳಗಾಗಿ ನೆಲದ ಮೇಲೆ ಬಿದ್ದು ವಂದಿಸಿದನು. ಯೋವಾಬನು, “ಅರಸನು ತನ್ನ ಸೇವಕನ ಮಾತಿನ ಪ್ರಕಾರ ಮಾಡಿದ್ದರಿಂದ, ನನ್ನ ಒಡೆಯನಾದ ಅರಸನೇ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತೆಂಬುದು ಈ ಹೊತ್ತು ನಿನ್ನ ಸೇವಕನಿಗೆ ತಿಳಿಯಿತು,” ಎಂದನು.
೨೨ಆಗ ಯೋವಾಬನು ನೆಲಕ್ಕೆ ಬಿದ್ದು ನಮಸ್ಕರಿಸಿ, ಅರಸನನ್ನು ಹರಸಿ, “ಅರಸನೇ ನನ್ನ ಒಡೆಯನೇ, ನೀನು ನಿನ್ನ ಸೇವಕನಾದ ನನ್ನ ಬಿನ್ನಹವನ್ನು ಲಾಲಿಸಿದ್ದರಿಂದ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತೆಂದು ಈಗ ಗೊತ್ತಾಯಿತು” ಎಂದು ಹೇಳಿದನು.
23 ಹಾಗೆಯೇ ಯೋವಾಬನು ಎದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದನು.
೨೩ನಂತರ ಯೋವಾಬನು ಎದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಯೆರೂಸಲೇಮಿಗೆ ಕರೆದುಕೊಂಡು ಬಂದನು.
24 ಆದರೆ ಅರಸನು, “ಅವನು ತನ್ನ ಮನೆಗೆ ತಿರುಗಿ ಹೋಗಲಿ. ಅವನು ನನ್ನ ಮುಖವನ್ನು ನೋಡಬಾರದು,” ಎಂದನು. ಆದ್ದರಿಂದ ಅಬ್ಷಾಲೋಮನು ಅರಸನ ಮುಖವನ್ನು ನೋಡದೆ ತನ್ನ ಮನೆಗೆ ತಿರುಗಿಹೋದನು.
೨೪ಆದರೆ ಅರಸನು, “ಅಬ್ಷಾಲೋಮನು ತನ್ನ ಮನೆಗೆ ಹೋಗಲಿ, ಅವನು ನನ್ನ ಮುಖವನ್ನು ನೋಡಬಾರದು” ಎಂದು ಆಜ್ಞಾಪಿಸಿದ್ದರಿಂದ ಅವನು ತನ್ನ ಮನೆಗೆ ಹೋದನು. ಅರಸನ ಮುಖವನ್ನು ನೋಡಲಿಲ್ಲ.
25 ಸಮಸ್ತ ಇಸ್ರಾಯೇಲಿನಲ್ಲಿ ಬಹಳ ಹೊಗಳಿಕೆಗೆ ಪಾತ್ರನಾದ ಅಬ್ಷಾಲೋಮನಂಥ ಸೌಂದರ್ಯವುಳ್ಳವನು ಒಬ್ಬನೂ ಇರಲಿಲ್ಲ. ಅವನ ಅಂಗಾಲು ಮೊದಲ್ಗೊಂಡು ನಡುನೆತ್ತಿಯವರೆಗೂ ಅವನಲ್ಲಿ ಒಂದು ಕಳಂಕವಾದರೂ ಇಲ್ಲದೆ ಇತ್ತು.
೨೫ಸೌಂದರ್ಯದಲ್ಲಿ ಅಬ್ಷಾಲೋಮನಂತೆ ಹೆಸರುಗೊಂಡ ಪುರುಷನು ಇಸ್ರಾಯೇಲರಲ್ಲಿ ಒಬ್ಬನೂ ಇರಲಿಲ್ಲ. ಅವನಲ್ಲಿ ಅಂಗಾಲಿನಿಂದ ನಡುನೆತ್ತಿಯ ವರೆಗೂ ಒಂದು ದೋಷವಾದರೂ ಇರಲಿಲ್ಲ.
26 ಅವನು ತನ್ನ ತಲೆಯ ಕೂದಲು ಭಾರವಾಗಿದೆ ಎಂದು ಪ್ರತಿವರ್ಷದ ಕೊನೆಯಲ್ಲಿ ಬೋಳಿಸಿಕೊಳ್ಳುತ್ತಿದ್ದನು. ಬೋಳಿಸಿಕೊಳ್ಳುವಾಗ ಅವನ ತಲೆಯ ಕೂದಲು ರಾಜರ ತೂಕದ ಪ್ರಕಾರ ಎರಡು ಕಿಲೋಗ್ರಾಂ ತೂಕವಾಗಿರುತ್ತಿತ್ತು.
೨೬ಅವನ ತಲೆಯ ಕೂದಲು ಬಹು ಭಾರವಾದ್ದರಿಂದ ಪ್ರತಿ ವರ್ಷದ ಅಂತ್ಯದಲ್ಲಿ ಬೋಳಿಸಿಕೊಳ್ಳುತ್ತಿದ್ದನು. ಆಗ ಅವನ ಕೂದಲು ರಾಜರ ತೂಕದ ಪ್ರಕಾರ ಇನ್ನೂರು ರೂಪಾಯಿ ತೂಕವಾಗುತ್ತಿತ್ತು.
27 ಅಬ್ಷಾಲೋಮನಿಗೆ ಮೂರು ಮಂದಿ ಪುತ್ರರೂ, ತಾಮಾರ್ ಎಂಬ ಒಬ್ಬ ಪುತ್ರಿಯೂ ಹುಟ್ಟಿದರು. ತಾಮಾರಳು ಸೌಂದರ್ಯವುಳ್ಳ ಸ್ತ್ರೀ ಆಗಿದ್ದಳು.
೨೭ಅವನಿಗೆ ಮೂರು ಮಂದಿ ಗಂಡು ಮಕ್ಕಳೂ, ಒಬ್ಬಳು ಮಗಳು ಇದ್ದಳು. ಮಗಳ ಹೆಸರು ತಾಮಾರಳು. ಈಕೆಯು ಬಹು ಸುಂದರಿಯಾಗಿದ್ದಳು.
28 ಅಬ್ಷಾಲೋಮನು ಅರಸನ ಮುಖವನ್ನು ಕಾಣದೆ, ಪೂರ್ಣವಾಗಿ ಎರಡು ವರ್ಷ ಯೆರೂಸಲೇಮಿನಲ್ಲಿ ವಾಸವಾಗಿದ್ದನು.
೨೮ಅಬ್ಷಾಲೋಮನು ಅರಸನ ಮೋರೆಯನ್ನು ನೋಡದೆ ಎರಡು ವರ್ಷ ಯೆರೂಸಲೇಮಿನಲ್ಲೇ ವಾಸವಾಗಿದ್ದನು.
29 ಆದ್ದರಿಂದ ಅಬ್ಷಾಲೋಮನು ಅರಸನ ಬಳಿಗೆ ತನ್ನನ್ನು ಕಳುಹಿಸುವುದಕ್ಕೆ ಯೋವಾಬನನ್ನು ಕರೆಕಳುಹಿಸಿದನು. ಆದರೆ ಅವನು ಅವನ ಬಳಿಗೆ ಬರಲೊಲ್ಲದೆ ಹೋದನು. ಎರಡನೆಯ ಸಾರಿ ಅವನನ್ನು ಕರೆಕಳುಹಿಸಿದನು. ಅವನು ಬರಲೊಲ್ಲದೆ ಹೋದನು.
೨೯ಒಂದು ದಿನ ಅವನು ಅರಸನ ಬಳಿಗೆ ಕಳುಹಿಸುವುದಕ್ಕಾಗಿ ಯೋವಾಬನನ್ನು ಕರೇಕಳುಹಿಸಿದನು. ಆದರೆ ಯೋವಾಬನು ಬರಲಿಲ್ಲ. ಎರಡನೆಯ ಸಾರಿ ಕರೇಕಳುಹಿಸಿದರೂ ಅವನು ಬರಲಿಲ್ಲ.
30 ಆದ್ದರಿಂದ ಅವನು ತನ್ನ ಸೇವಕರಿಗೆ, “ನೋಡಿರಿ, ನನ್ನ ಹೊಲಕ್ಕೆ ಸಮೀಪವಾಗಿ ಯೋವಾಬನ ಹೊಲವಿದೆ. ಅದರಲ್ಲಿ ಜವೆಗೋಧಿ ಇದೆ. ನೀವು ಹೋಗಿ ಅದನ್ನು ಬೆಂಕಿಯಿಂದ ಸುಟ್ಟುಬಿಡಿರಿ,” ಎಂದನು. ಹಾಗೆಯೇ ಅಬ್ಷಾಲೋಮನ ಸೇವಕರು ಆ ಹೊಲಕ್ಕೆ ಬೆಂಕಿಯನ್ನು ಹಚ್ಚಿದರು.
೩೦ಆದುದರಿಂದ ಅಬ್ಷಾಲೋಮನು ತನ್ನ ಸೇವಕರಿಗೆ, “ನೋಡಿರಿ, ಸಮೀಪದಲ್ಲಿಯೇ ಯೋವಾಬನ ಜವೆಗೋದಿಯ ಹೊಲವುಂಟಲ್ಲಾ, ಹೋಗಿ ಅದಕ್ಕೆ ಬೆಂಕಿ ಹಚ್ಚಿರಿ” ಎಂದು ಆಜ್ಞಾಪಿಸಿದನು. ಅವರು ಹಾಗೆಯೇ ಮಾಡಿದರು.
31 ಆಗ ಯೋವಾಬನು ಎದ್ದು ಅಬ್ಷಾಲೋಮನ ಮನೆಗೆ ಬಂದು ಅವನಿಗೆ, “ನನ್ನ ಹೊಲವನ್ನು ನಿನ್ನ ಸೇವಕರು ಬೆಂಕಿಯಿಂದ ಸುಟ್ಟುಬಿಟ್ಟಿದ್ದೇಕೆ?” ಎಂದು ಕೇಳಿದನು.
೩೧ಆಗ ಯೋವಾಬನು ಅಬ್ಷಾಲೋಮನ ಮನೆಗೆ ಹೋಗಿ, “ನಿನ್ನ ಸೇವಕರು ನನ್ನ ಹೊಲಕ್ಕೆ ಬೆಂಕಿ ಹಚ್ಚಿದ್ದೇಕೆ?” ಎಂದು ಅವನನ್ನು ಕೇಳಿದನು.
32 ಅಬ್ಷಾಲೋಮನು ಯೋವಾಬನಿಗೆ, “ನಾನು ಗೆಷೂರಿನಿಂದ ಏಕೆ ಬಂದೆನೆಂದು ಅರಸನಿಗೆ ಹೇಳುವುದಕ್ಕೆ ನಿನ್ನನ್ನು ಕಳುಹಿಸುವ ಹಾಗೆ ‘ಇಲ್ಲಿಗೆ ಬಾ’ ಎಂದು ನಿನ್ನನ್ನು ಕರೆಕಳುಹಿಸಿದೆನು. ನಾನು ಇನ್ನೂ ಅಲ್ಲಿಯೇ ಇದ್ದಿದ್ದರೆ ನನಗೆ ಉತ್ತಮವಾಗಿತ್ತು. ಈಗ ನಾನು ಅರಸನ ಮುಖವನ್ನು ನೋಡಬೇಕು. ನನ್ನಲ್ಲಿ ಅಕ್ರಮ ಇದ್ದರೆ, ಅವನು ನನ್ನನ್ನು ಕೊಂದು ಹಾಕಲಿ,” ಎಂದನು.
೩೨ಅದಕ್ಕೆ ಅಬ್ಷಾಲೋಮನು ಅವನಿಗೆ, “ನಾನು ಗೆಷೂರಿನಿಂದ ಇಲ್ಲಿಗೆ ಬಂದದ್ದೇಕೆ, ಅಲ್ಲೇ ಇದ್ದರೆ ಒಳ್ಳೆಯದಾಗುತ್ತಿತ್ತಲ್ಲವೋ ಎಂದು ನಿನ್ನ ಮುಖಾಂತರ ಅರಸನಿಗೆ ತಿಳಿಸುವುದಕ್ಕಾಗಿ ನಿನ್ನನ್ನು ಕರೇಕಳುಹಿಸಿದೆನು. ನಾನು ಹೇಗೂ ಅರಸನ ದರ್ಶನ ಮಾಡಬೇಕು. ನಾನು ಅಪರಾಧಿಯಾಗಿದ್ದರೆ ನನ್ನನ್ನು ಕೊಲ್ಲಿಸಲಿ” ಎಂದನು.
33 ಹಾಗೆಯೇ ಯೋವಾಬನು ಅರಸನ ಬಳಿಗೆ ಹೋಗಿ ತಿಳಿಸಿದ್ದರಿಂದ, ಅರಸನು ಅಬ್ಷಾಲೋಮನನ್ನು ಕರೆಸಿದನು. ಆಗ ಅವನು ಅರಸನ ಬಳಿಗೆ ಬಂದು ಸಾಷ್ಟಾಂಗ ನಮಸ್ಕಾರಮಾಡಿದನು. ಆಗ ಅರಸನು ಅಬ್ಷಾಲೋಮನಿಗೆ ಮುದ್ದಿಟ್ಟನು.
೩೩ಯೋವಾಬನು ಹೋಗಿ ಇದನ್ನು ಅರಸನಿಗೆ ತಿಳಿಸಿದಾಗ ಅರಸನು ಅಬ್ಷಾಲೋಮನನ್ನು ಕರೇಕಳುಹಿಸಿದನು. ಅವನು ಅರಸನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. ಅರಸನು ಅವನನ್ನು ಮುದ್ದಿಟ್ಟನು.

< ಸಮುವೇಲನು - ದ್ವಿತೀಯ ಭಾಗ 14 >