ಲೂಕನು 1

1 ಸನ್ಮಾನ್ಯನಾದ ಥೆಯೊಫಿಲನೇ, ನಮ್ಮ ಮಧ್ಯೆ ನೆರವೇರಿರುವ ಘಟನೆಗಳನ್ನು ಕ್ರಮವಾಗಿ ಬರೆಯುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ. 2 ಪ್ರಾರಂಭದಿಂದಲೂ ಕಣ್ಣಾರೆ ಕಂಡು ಸುವಾರ್ತಾವಾಕ್ಯವನ್ನು ಸಾರುತ್ತಿದ್ದವರು ನಮಗೆ ತಿಳಿಸಿದ ಪ್ರಕಾರ ಆ ಘಟನೆಗಳನ್ನು, 3 ನಾನು ಅಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಒಳ್ಳೆಯದೆಂದು ನನಗೂ ತೋಚಿತು. 4 ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನೀನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. 5 ಯೂದಾಯದ ಅರಸನಾದ ಹೆರೋದನ ಕಾಲದಲ್ಲಿ ಅಬೀಯನ ಯಾಜಕೀಯ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಅವನ ಹೆಂಡತಿಯು ಆರೋನನ ವಂಶದವಳಾಗಿದ್ದಳು. ಆಕೆಯ ಹೆಸರು ಎಲಿಸಬೇತ್. 6 ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ, ನೇಮನಿಷ್ಠೆಗಳನ್ನೂ ಕೈಕೊಂಡು ತಪ್ಪಿಲ್ಲದೆ ನಡೆದುಕೊಳ್ಳುತ್ತಾ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು. 7 ಆದರೆ ಎಲಿಸಬೇತಳು ಬಂಜೆಯಾದುದರಿಂದ ಅವರಿಗೆ ಮಕ್ಕಳಿರಲಿಲ್ಲ; ಇದಲ್ಲದೆ ಅವರಿಬ್ಬರೂ ವಯೋವೃದ್ಧರಾಗಿದ್ದರು. 8 ಒಂದು ದಿನ ಜಕರೀಯನ ವರ್ಗದ ಸರದಿ ಬಂದಾಗ ಅವನು ದೇವರ ಸನ್ನಿಧಿಯಲ್ಲಿ ಯಾಜಕಧರ್ಮವನ್ನು ನಡೆಸುತ್ತಿದ್ದನು. 9 ದೇವಾಲಯದೊಳಕ್ಕೆ ಹೋಗಿ ಧೂಪವನ್ನರ್ಪಿಸುವುದಕ್ಕೆ ಯಾಜಕರ ಪದ್ಧತಿಯ ಪ್ರಕಾರ ಚೀಟು ಹಾಕಲು ಅದು ಅವನ ಪಾಲಿಗೆ ಬಂದಿತು. 10 ೧೦ ಧೂಪವನ್ನು ಅರ್ಪಿಸುವ ಹೊತ್ತಿನಲ್ಲಿ ಜನಸಮೂಹದವರೆಲ್ಲರು ಹೊರಗೆ ನಿಂತು ಪ್ರಾರ್ಥಿಸುತ್ತಿರಲಾಗಿ, 11 ೧೧ ಕರ್ತನ ದೂತನು ಧೂಪಪೀಠದ ಬಲಗಡೆಯಲ್ಲಿ ನಿಂತುಕೊಂಡವನಾಗಿ ಅವನಿಗೆ ಕಾಣಿಸಿಕೊಂಡನು. 12 ೧೨ ಜಕರೀಯನು ಅವನನ್ನು ಕಂಡು ತತ್ತರಗೊಂಡು ಭಯಭ್ರಾಂತನಾದನು. 13 ೧೩ ಆದರೆ ಆ ದೂತನು ಅವನಿಗೆ, “ಜಕರೀಯನೇ, ಭಯಪಡಬೇಡ; ದೇವರು ನಿನ್ನ ವಿಜ್ಞಾಪನೆ ಕೇಳಿದ್ದಾನೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು. 14 ೧೪ ನಿನಗೆ ಸಂತೋಷವೂ ಉಲ್ಲಾಸವೂ ಉಂಟಾಗುವುದು; ಮತ್ತು ಅವನು ಹುಟ್ಟಿದ್ದಕ್ಕೆ ಬಹುಜನರು ಸಂತೋಷಪಡುವರು. 15 ೧೫ ಅವನು ಕರ್ತನ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು; ದ್ರಾಕ್ಷಾರಸವನ್ನಾಗಲಿ, ಯಾವ ಮದ್ಯವನ್ನಾಗಲಿ ಕುಡಿಯಬಾರದು; ಅವನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು. 16 ೧೬ ಇಸ್ರಾಯೇಲರಲ್ಲಿ ಅನೇಕರನ್ನು ಅವರ ದೇವರಾಗಿರುವ ಕರ್ತನ ಕಡೆಗೆ ತಿರುಗಿಸುವನು. 17 ೧೭ ಅವನು ಎಲೀಯನ ಗುಣಶಕ್ತಿಗಳಿಂದ ಕೂಡಿದವನಾಗಿ ಕರ್ತನ ಮುಂದೂತನಾಗಿ ಹೋಗುವನು. ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ, ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತನಿಗಾಗಿ ಜನರನ್ನು ಸಿದ್ಧಪಡಿಸುವನು” ಎಂದು ಹೇಳಿದನು. 18 ೧೮ ಜಕರೀಯನು ಆ ದೂತನಿಗೆ, “ಈ ಮಾತು ನೆರವೇರುವುದೆಂದು ನಾನು ತಿಳಿದುಕೊಳ್ಳುವುದಾದರೂ ಹೇಗೆ? ನಾನು ಮುದುಕನು; ನನ್ನ ಹೆಂಡತಿಗೂ ಮುಪ್ಪಿನ ವಯಸ್ಸು” ಎಂದು ಹೇಳಿದನು. 19 ೧೯ ಅದಕ್ಕೆ ಆ ದೂತನು, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನೊಂದಿಗೆ ಮಾತನಾಡಿ ಈ ಶುಭವಾರ್ತೆಯನ್ನು ನಿನಗೆ ತಿಳಿಸುವುದಕ್ಕಾಗಿ ನಾನು ಕಳುಹಿಸಲ್ಪಟ್ಟಿದ್ದೇನೆ. 20 ೨೦ ಇಗೋ, ಈ ನನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವುದು; ಆದರೆ ನೀನು ಇದನ್ನು ನಂಬದೆಹೋದುದರಿಂದ ಅದೆಲ್ಲಾ ಸಂಭವಿಸುವ ದಿನದ ವರೆಗೂ ಮಾತನಾಡಲಾರದೆ ಮೂಕನಾಗಿರುವೆ” ಎಂದು ಅವನಿಗೆ ಉತ್ತರಕೊಟ್ಟನು. 21 ೨೧ ಇತ್ತ ಜನರು ಜಕರೀಯನಿಗಾಗಿ ಕಾದುಕೊಂಡಿದ್ದು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು. 22 ೨೨ ಅವನು ಹೊರಗೆ ಬಂದಾಗ ಅವರ ಕೂಡ ಏನೂ ಮಾತನಾಡಲಾರದೆ ಇರಲು ಅವರು, ಇವನಿಗೆ ದೇವಾಲಯದಲ್ಲಿ ಏನೋ ದಿವ್ಯ ದರ್ಶನವಾಗಿರಬೇಕು ಎಂದು ತಿಳಿದುಕೊಂಡರು. ಜಕರೀಯನು ಅವರಿಗೆ ಕೈಸನ್ನೆ ಮಾಡುತ್ತಾ ಮೂಕನಾಗಿಯೇ ಇದ್ದನು. 23 ೨೩ ಆತನ ಯಾಜಕವರ್ಗದ ಸೇವೆಯ ದಿನಗಳು ಮುಗಿದ ನಂತರ ಜಕರೀಯನು ತನ್ನ ಮನೆಗೆ ಹೋದನು. 24 ೨೪ ಕೆಲವು ದಿನಗಳಾದ ನಂತರ ಅವನ ಹೆಂಡತಿಯಾದ ಎಲಿಸಬೇತಳು ಬಸುರಾಗಿ ಐದು ತಿಂಗಳು ಮನೆಯಲ್ಲೇ ಮರೆಯಾಗಿದ್ದಳು. 25 ೨೫ “ಕರ್ತನು ಈ ವಯಸ್ಸಿನಲ್ಲಿ ನನ್ನನ್ನು ಕಟಾಕ್ಷಿಸಿ, ನನಗೆ ಈ ರೀತಿಯಾಗಿ ಮಾಡಿ, ಜನರ ಮಧ್ಯದಲ್ಲಿ ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನಲ್ಲಾ” ಎಂದು ಹೇಳಿದಳು. 26 ೨೬ ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ದೇವರು ಗಬ್ರಿಯೇಲನೆಂಬ ತನ್ನ ದೂತನನ್ನು ಗಲಿಲಾಯ ಸೀಮೆಯ, ನಜರೇತೆಂಬ ಊರಿಗೆ, ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದನು; 27 ೨೭ ಆ ಕನ್ನಿಕೆಯ ಹೆಸರು ಮರಿಯಳು; ಆಕೆಗೆ ದಾವೀದನ ಮನೆತನದ ಯೋಸೇಫನೆಂಬ ಪುರುಷನೊಂದಿಗೆ ನಿಶ್ಚಿತಾರ್ಥವಾಗಿತ್ತು. 28 ೨೮ ಆ ದೂತನು ಆಕೆಯ ಬಳಿಗೆ ಬಂದು “ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ ಕರ್ತನು ನಿನ್ನ ಸಂಗಡ ಇದ್ದಾನೆ” ಅಂದನು. 29 ೨೯ ಆಕೆಯು ಆ ಮಾತಿಗೆ ತಬ್ಬಿಬ್ಬಾಗಿ, ಇದೆಂಥ ಆಶೀರ್ವಾದ ಎಂದು ಯೋಚನೆಮಾಡುತ್ತಿದ್ದಳು. 30 ೩೦ ಆ ದೂತನು ಆಕೆಗೆ, “ಮರಿಯಳೇ, ಹೆದರಬೇಡ; ನಿನಗೆ ದೇವರ ಕೃಪೆ ದೊರಕಿದೆ. 31 ೩೧ ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. 32 ೩೨ ಆತನು ಮಹಾಪುರುಷನಾಗುವನು, ಪರಾತ್ಪರನಾದ ದೇವರ ಕುಮಾರನೆಂದು ಕರೆಯಲ್ಪಡುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. 33 ೩೩ ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇರದು” ಎಂದು ಹೇಳಿದನು. (aiōn g165) 34 ೩೪ ಆಗ ಮರಿಯಳು ಆ ದೂತನಿಗೆ, “ಇದು ಹೇಗಾದೀತು? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ” ಎಂದು ಕೇಳಿದಳು. 35 ೩೫ ಅದಕ್ಕೆ ದೂತನು, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಪರಾತ್ಪರನಾದ ದೇವರ ಶಕ್ತಿಯು ನಿನ್ನನ್ನು ಅವರಿಸುವುದು; ಆದುದರಿಂದ ನಿನಗೆ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವನು. 36 ೩೬ ಇಗೋ, ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡು ಮಗುವಿದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಈಗ ಆರನೆಯ ತಿಂಗಳು. 37 ೩೭ ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ” ಅಂದನು. 38 ೩೮ ಆಗ ಮರಿಯಳು “ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ” ಅಂದಳು. ಆ ಮೇಲೆ ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು. 39 ೩೯ ಇದಾದ ನಂತರ ಮರಿಯಳು ಎದ್ದು ತ್ವರೆಯಾಗಿ ಯೆಹೂದದ ಮಲೆನಾಡಿನಲ್ಲಿರುವ ಒಂದು ಊರಿಗೆ ಹೋದಳು. 40 ೪೦ ಜಕರೀಯನ ಮನೆಯನ್ನು ಸೇರಿ ಎಲಿಸಬೇತಳಿಗೆ ವಂದಿಸಿದಳು. 41 ೪೧ ಎಲಿಸಬೇತಳು ಮರಿಯಳ ವಂದನೆಯನ್ನು ಕೇಳುತ್ತಲೇ ಆಕೆಯ ಗರ್ಭದಲ್ಲಿದ್ದ ಕೂಸು ಕುಣಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮಭರಿತಳಾದಳು. 42 ೪೨ ಆಗ ಆಕೆಯು ಮಹಾಧ್ವನಿಯಿಂದ ಕೂಗಿ, “ನೀನು ಸ್ತ್ರೀಯರೊಳಗೆ ಧನ್ಯಳು, ಮತ್ತು ನಿನ್ನಲ್ಲಿ ಹುಟ್ಟುವ ಕೂಸು ಆಶೀರ್ವಾದ ಹೊಂದಿದ್ದು. 43 ೪೩ ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವಷ್ಟು ಸೌಭಾಗ್ಯ ನನಗೆ ಎಲ್ಲಿಂದಾಯಿತು? 44 ೪೪ ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಕುಣಿದಾಡಿತು. 45 ೪೫ ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು. ಇದನ್ನು ನಂಬಿದವಳಾದ ನೀನು ಧನ್ಯಳು.” 46 ೪೬ ಆಗ ಮರಿಯಳು, “ನನ್ನ ಪ್ರಾಣವು ಕರ್ತನನ್ನು ಕೊಂಡಾಡುತ್ತದೆ, 47 ೪೭ ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ. 48 ೪೮ ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ. ಇಗೋ, ಇಂದಿನಿಂದ ತಲತಲಾಂತರದವರೆಗೆ ಎಲ್ಲರೂ ನನ್ನನ್ನು ಧನ್ಯಳೆಂದು ಹೊಗಳುವರು, 49 ೪೯ ಏಕೆಂದರೆ ಶಕ್ತನಾಗಿರುವಾತನು ನನಗೆ ದೊಡ್ಡ ಉಪಕಾರಗಳನ್ನು ಮಾಡಿದ್ದಾನೆ; ಆತನ ನಾಮವು ಪರಿಶುದ್ಧವಾದುದು. 50 ೫೦ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯೆಯು ತಲತಲಾಂತರದ ವರೆಗೂ ಇರುವುದು. 51 ೫೧ ಆತನು ತನ್ನ ಭುಜಪರಾಕ್ರಮದಿಂದ ಸೊಕ್ಕಿದ ಮನಸ್ಸುಳ್ಳವರನ್ನು ಚದರಿಸಿಬಿಟ್ಟಿದ್ದಾನೆ. 52 ೫೨ ಪ್ರಭುಗಳನ್ನು ಸಿಂಹಾಸನಗಳಿಂದ ಕೆಳಗೆ ದೊಬ್ಬಿ, ದೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ತಂದಿದ್ದಾನೆ. 53 ೫೩ ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ, ಸಿರಿವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ. 54 ೫೪ ಆತನು ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂತೆ ಅಬ್ರಹಾಮನಿಗೂ ಅವನ ವಂಶದವರಿಗೂ ಯಾವಾಗಲೂ ದಯೆ ತೋರಿಸಬೇಕೆಂಬುದನ್ನು ನೆನಪಿಸಿಕೊಂಡು, ತನ್ನ ಸೇವಕನಾದ ಇಸ್ರಾಯೇಲನಿಗೆ ನೆರವಾಗಿದ್ದಾನೆ” ಎಂದಳು. (aiōn g165) 55 ೫೫ 56 ೫೬ ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಬಳಿಯಲ್ಲಿದ್ದು ತನ್ನ ಮನೆಗೆ ಹಿಂತಿರುಗಿ ಹೋದಳು. 57 ೫೭ ಹೆರಿಗೆಕಾಲ ಬಂದಾಗ ಎಲಿಸಬೇತಳು ಗಂಡು ಮಗುವನ್ನು ಹೆತ್ತಳು. 58 ೫೮ ಆಕೆಯ ನೆರೆಹೊರೆಯವರೂ ಬಂಧುಬಾಂಧವರೂ ಆಕೆಯ ಮೇಲೆ ಕರ್ತನು ತನ್ನ ವಿಶೇಷ ದಯೆಯನ್ನು ತೋರಿಸಿದ್ದಾನೆಂಬುದನ್ನು ಕೇಳಿ ಆಕೆಯ ಸಂಗಡ ಸಂತೋಷಪಟ್ಟರು. 59 ೫೯ ಎಂಟನೆಯ ದಿನದಲ್ಲಿ ಅವರು ಆ ಮಗುವಿಗೆ ಸುನ್ನತಿಮಾಡುವುದಕ್ಕಾಗಿ ಬಂದು ಅದಕ್ಕೆ ಜಕರೀಯನೆಂದು ತಂದೆಯ ಹೆಸರನ್ನು ಇಡಬೇಕೆಂದಿದ್ದರು. 60 ೬೦ ಈ ವಿಷಯದಲ್ಲಿ ಎಲಿಸಬೇತಳು “ಅದು ಬೇಡ, ಯೋಹಾನನೆಂದು ಹೆಸರಿಡಬೇಕು” ಅನ್ನಲು, 61 ೬೧ ಅವರು, “ನಿನ್ನ ಬಂಧುಬಾಂಧವರಲ್ಲಿ ಈ ಹೆಸರಿನವರು ಒಬ್ಬರಾದರೂ ಇಲ್ಲವಲ್ಲಾ” ಎಂದು ಆಕೆಗೆ ಹೇಳಿದರು. 62 ೬೨ ಇದಕ್ಕೆ ಏನು ಹೆಸರಿಡಬೇಕೆಂದಿರುತ್ತೀ ಎಂಬುದಾಗಿ ಜಕರೀಯನಿಗೆ ಸನ್ನೆಮಾಡಿ ಕೇಳಿದರು. 63 ೬೩ ಅವನು ಒಂದು ಹಲಗೆಯನ್ನು ತರಿಸಿಕೊಂಡು, “ಆತನ ಹೆಸರು ಯೋಹಾನನು” ಎಂದು ಬರೆದನು. ಅದಕ್ಕೆ ಎಲ್ಲರೂ ಆಶ್ಚರ್ಯಪಟ್ಟರು. 64 ೬೪ ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು, ನಾಲಿಗೆ ಸಡಿಲವಾಯಿತು, ಅವನು ಮಾತನಾಡುವವನಾಗಿ ದೇವರನ್ನು ಕೊಂಡಾಡಿದನು. 65 ೬೫ ಇದನ್ನು ಕೇಳಿದ ನೆರೆಹೊರೆಯವರಿಗೆಲ್ಲಾ ಹೆದರಿಕೆಯುಂಟಾಯಿತು ಮತ್ತು ಈ ಎಲ್ಲಾ ಸಂಗತಿಗಳನ್ನು ಕುರಿತು ಯೂದಾಯದ ಮಲೆನಾಡಿನಲ್ಲೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. 66 ೬೬ ಈ ಸಂಗತಿಗಳನ್ನು ಕೇಳಿದವರೆಲ್ಲರೂ, “ಆಹಾ, ಈ ಕೂಸು ಎಂಥವನಾಗುವನೋ?” ಅಂದುಕೊಂಡರು, ಆದರೆ ಕರ್ತನ ಅಭಯ ಹಸ್ತವು ಅವನ ಮೇಲೆ ಇತ್ತು. 67 ೬೭ ಇದಲ್ಲದೆ ಆ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ನುಡಿದ ಪ್ರವಾದನೆ ಏನೆಂದರೆ, 68 ೬೮ “ಇಸ್ರಾಯೇಲರ ದೇವರಾಗಿರುವ ಕರ್ತನಿಗೆ ಸ್ತೋತ್ರವು; ತನ್ನ ಪ್ರಜೆಯನ್ನು ಸಂಧಿಸಿ ಅವರಿಗೆ ಬಿಡುಗಡೆಯನ್ನುಂಟುಮಾಡಿದ್ದಾನೆ; 69 ೬೯ ತನ್ನ ಸೇವಕನಾದ ದಾವೀದನ ಮನೆತನದಲ್ಲಿ, ನಮಗೋಸ್ಕರ ಒಬ್ಬ ರಕ್ಷಣಾವೀರನನ್ನು ಎಬ್ಬಿಸಿದ್ದಾನೆ. 70 ೭೦ ಆತನು ಪೂರ್ವಕಾಲದಲ್ಲಿಯೇ ತನ್ನ ಪರಿಶುದ್ಧ ಪ್ರವಾದಿಗಳ ಮೂಲಕ ತಾನು ಹೇಳಿದಂತೆಯೇ, (aiōn g165) 71 ೭೧ ನಮ್ಮ ವೈರಿಗಳಿಂದಲೂ, ನಮ್ಮನ್ನು ದ್ವೇಷಿಸುವವರೆಲ್ಲರ ಕೈಯಿಂದಲೂ ನಮ್ಮನ್ನು ತಪ್ಪಿಸಿ ರಕ್ಷಿಸಿದ್ದಾನೆ. 72 ೭೨ ಆತನು ನಮ್ಮ ಪೂರ್ವಿಕರಿಗೆ ದಯೆಯನ್ನು ತೋರಿಸುವುದರ ಮೂಲಕ ನಮ್ಮ ಮೂಲಪಿತೃವಾದ ಅಬ್ರಹಾಮನಿಗೆ ಪ್ರಮಾಣಮಾಡಿ ಕೊಟ್ಟ ತನ್ನ ಪರಿಶುದ್ಧವಾದ ಒಡಂಬಡಿಕೆಯನ್ನು ನೆನಪಿಸಿಕೊಳ್ಳುವವನಾಗಿದ್ದಾನೆ. 73 ೭೩ 74 ೭೪ ಹೀಗೆ ನಾವು ನಮ್ಮ ವೈರಿಗಳ ಕೈಯಿಂದ ಬಿಡುಗಡೆಹೊಂದಿ ಭಯವಿಲ್ಲದವರಾಗಿದ್ದು, ನಮ್ಮ ಜೀವಮಾನದಲ್ಲೆಲ್ಲಾ ನಿರ್ಮಲಚಿತ್ತದಿಂದಲೂ ನೀತಿಯಿಂದಲೂ ತನ್ನ ಸನ್ನಿಧಿಯಲ್ಲಿ ಸೇವೆಮಾಡುವಂತೆ ನಮಗೆ ಅನುಕೂಲಮಾಡಿದ್ದಾನೆ. 75 ೭೫ 76 ೭೬ ಮಗುವೇ, ನೀನಾದರೋ ಪರಾತ್ಪರನಾದ ದೇವರ ಪ್ರವಾದಿಯೆನಿಸಿಕೊಳ್ಳುವಿ. ನೀನು ಕರ್ತನ ಮುಂದೆ ಹೋಗಿ ಆತನ ಹಾದಿಗಳನ್ನು ಸಿದ್ಧಮಾಡುವವನಾಗಿಯೂ, 77 ೭೭ ನಮ್ಮ ದೇವರು ಅತ್ಯಂತಕರುಣೆಯಿಂದ ದಯಪಾಲಿಸುವ ಪಾಪಕ್ಷಮೆಯೆಂಬ ರಕ್ಷಣೆಯ ತಿಳಿವಳಿಕೆಯನ್ನು ಆತನ ಪ್ರಜೆಗೆ ತಿಳಿಸಿಕೊಡುವವನಾಗಿಯೂ ಇರುವಿ. ಆ ಕರುಣೆಯಿಂದಲೇ ನಮಗೆ ಮೇಲಿನಿಂದ ಅರುಣೋದಯವು ಉಂಟಾಗಿ, 78 ೭೮ 79 ೭೯ ಅದು ಕತ್ತಲಲ್ಲಿಯೂ, ಮರಣಾಂಧಕಾರದಲ್ಲಿಯೂ ವಾಸಿಸುತ್ತಿದ್ದ ನಮಗೆ ಬೆಳಕನ್ನು ಕೊಟ್ಟು ನಮ್ಮ ಕಾಲುಗಳನ್ನು ಸಮಾಧಾನದ ಮಾರ್ಗದಲ್ಲಿ ಸೇರಿಸಿ ನಡಿಸುವುದು.” 80 ೮೦ ಆ ಬಾಲಕನು ಬೆಳೆದು ಆತ್ಮದಲ್ಲಿ ಬಲವುಳ್ಳವನಾದನು. ಮತ್ತು ಇಸ್ರಾಯೇಲ್ ಜನರಿಗೆ ತನ್ನನ್ನು ತೋರ್ಪಡಿಸಿಕೊಳ್ಳುವ ದಿನದವರೆಗೂ ಮರುಭೂಮಿಯ ಪ್ರದೇಶಗಳಲ್ಲಿ ಇದ್ದನು.