< ಆದಿಕಾಂಡ 29 >

1 ಆಗ ಯಾಕೋಬನು ಪ್ರಯಾಣ ಮಾಡಿ ಪೂರ್ವ ದಿಕ್ಕಿನ ಜನರ ಸೀಮೆಗೆ ಬಂದನು. 2 ಅವನು ಕಣ್ಣೆತ್ತಿ ನೋಡಲಾಗಿ ಹೊಲದಲ್ಲಿ ಬಾವಿಯನ್ನು ಕಂಡನು. ಬಾವಿಯ ಹತ್ತಿರ ಮೂರು ಕುರಿಹಿಂಡುಗಳು ಮಲಗಿದ್ದವು. ಆ ಬಾವಿಯ ನೀರನ್ನು ಮಂದೆಗಳಿಗೆ ಕುಡಿಸುತ್ತಿದ್ದರು. ಆ ಬಾವಿಯ ಮೇಲೆ ಒಂದು ದೊಡ್ಡ ಕಲ್ಲನ್ನು ಇಡಲಾಗಿತ್ತು. 3 ಹಿಂಡುಗಳೆಲ್ಲಾ ಅಲ್ಲಿ ಕೂಡಿದಾಗ ಕುರಿಕಾಯುವವರು ಬಾವಿಯ ಮೇಲೆ ಮುಚ್ಚಿದ್ದ ಕಲ್ಲನ್ನು ಉರುಳಿಸಿ ಕುರಿಗಳಿಗೆ ನೀರು ಕುಡಿಸಿ ತಿರುಗಿ ಕಲ್ಲನ್ನು ಬಾವಿಯ ಮೇಲೆ ಮುಚ್ಚುತ್ತಿದ್ದರು. 4 ಯಾಕೋಬನು ಅವರಿಗೆ, “ಅಣ್ಣಂದಿರೇ, ನೀವು ಎಲ್ಲಿಯವರು?” ಎಂದು ಕೇಳಲು ಅವರು, “ನಾವು ಖಾರಾನ್ ಊರಿನವರು” ಎಂದರು. 5 ಅದಕ್ಕೆ ಅವನು ಅವರಿಗೆ, “ನಾಹೋರನ ಮಗನಾದ ಲಾಬಾನನನ್ನು ನೀವು ಬಲ್ಲಿರೋ?” ಎಂದು ಕೇಳಿದ್ದಕ್ಕೆ, “ನಾವು ಅವನನ್ನು ಬಲ್ಲೆವು” ಎಂದರು. 6 ಅವನು ಅವರಿಗೆ, “ಅವನು ಕ್ಷೇಮವಾಗಿದ್ದಾನೋ?” ಎಂದು ಕೇಳಲು ಅವರು, “ಕ್ಷೇಮವಾಗಿದ್ದಾನೆ. ಅಗೋ, ಅವನ ಮಗಳಾದ ರಾಹೇಲಳು ಕುರಿಗಳ ಸಂಗಡ ಬರುತ್ತಿದ್ದಾಳೆ” ಎಂದರು. 7 ಯಾಕೋಬನು ಅವರಿಗೆ, “ಇನ್ನೂ ಹೊತ್ತು ಬಹಳ ಇದೆ, ಮಂದೆಗಳಿಗೆ ನೀರನ್ನು ಕುಡಿಸಿ ಪುನಃ ಮೇಯಿಸಿಕೊಂಡು ಬನ್ನಿರಿ ಅನ್ನಲು ಅವರು, 8 ಮಂದೆಗಳೆಲ್ಲವು ಬಂದ ನಂತರ ಅವರು ಬಾವಿಯ ಮೇಲೆ ಮುಚ್ಚಿರುವ ಕಲ್ಲನ್ನು ತೆಗೆದು; ಅನಂತರ ಕುರಿಗಳಿಗೆ ನೀರು ಕುಡಿಸುತ್ತೇವೆ” ಎಂದರು. 9 ಅವನು ಅವರೊಂದಿಗೆ ಮಾತನಾಡುತ್ತಿರುವಾಗಲೇ ರಾಹೇಲಳು ತನ್ನ ತಂದೆಯ ಕುರಿಗಳ ಸಂಗಡ ಬಂದಳು; ಆಕೆಯೇ ಅವುಗಳನ್ನು ಮೇಯಿಸುತ್ತಿದ್ದಳು. 10 ೧೦ ಯಾಕೋಬನು ತನ್ನ ತಾಯಿಯ ಅಣ್ಣನಾದ ಲಾಬಾನನ ಮಗಳಾದ ರಾಹೇಲಳನ್ನೂ ಲಾಬಾನನ ಕುರಿಗಳನ್ನೂ ಕಂಡಾಗ ಬಾವಿಯ ಹತ್ತಿರಕ್ಕೆ ಹೋಗಿ ಅದರ ಮೇಲೆ ಮುಚ್ಚಿದ್ದ ಕಲ್ಲನ್ನು ಸರಿಸಿ ಲಾಬನನ ಕುರಿಗಳಿಗೆ ನೀರು ಕುಡಿಸಿದನು. 11 ೧೧ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು ಜೋರಾಗಿ ಅತ್ತು ಆಕೆಗೆ, 12 ೧೨ “ನಾನು ನಿನ್ನ ತಂದೆಯ ಸೋದರಳಿಯನೂ ರೆಬೆಕ್ಕಳ ಮಗನಾದ ಯಾಕೋಬನೆಂದು ತಿಳಿಸಿದನು” ಆಗ ರಾಹೇಲಳು ಓಡಿಹೋಗಿ ಆ ಮಾತನ್ನು ತನ್ನ ತಂದೆಗೆ ತಿಳಿಸಿದಳು. 13 ೧೩ ಲಾಬಾನನು ತನ್ನ ಸಹೋದರಿಯ ಮಗನಾದ ಯಾಕೋಬನು ಬಂದಿರುವ ವರ್ತಮಾನವನ್ನು ಕೇಳಿದಾಗ ಅವನನ್ನು ಎದುರುಗೊಳ್ಳುವುದಕ್ಕೆ ಓಡಿಬಂದು ಅಪ್ಪಿಕೊಂಡು ಮುದ್ದಿಟ್ಟು ತನ್ನ ಮನೆಗೆ ಕರೆದುಕೊಂಡು ಬಂದನು. 14 ೧೪ ಯಾಕೋಬನು ಲಾಬಾನನಿಗೆ ಎಲ್ಲಾ ಸಂಗತಿಗಳನ್ನು ತಿಳಿಸಲು ಲಾಬಾನನು ಅವನಿಗೆ, “ನಿಜವಾಗಿ ನೀನು ನನ್ನ ರಕ್ತ ಸಂಬಂಧಿಯಾಗಿದ್ದಿ” ಎಂದು ಹೇಳಿದನು. 15 ೧೫ ಅವನು ಒಂದು ತಿಂಗಳಿನವರೆಗೂ ಲಾಬಾನನ ಬಳಿಯಲ್ಲಿ ವಾಸಮಾಡಿದನು. ಆ ಮೇಲೆ ಲಾಬಾನನು ಯಾಕೋಬನಿಗೆ, “ನೀನು ನನ್ನ ಸಂಬಂಧಿಯೆಂದು ಸುಮ್ಮನೆ ಸೇವೆ ಮಾಡುವುದು ನ್ಯಾಯವೋ? ನಿನ್ನ ಕೆಲಸಕ್ಕಾಗಿ ನಾನು ನಿನಗೆ ಏನು ಕೊಡಲಿ?” ಎಂದು ಕೇಳಿದನು. 16 ೧೬ ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು; ದೊಡ್ಡವಳ ಹೆಸರು ಲೇಯಾ, ಚಿಕ್ಕವಳ ಹೆಸರು ರಾಹೇಲ್. 17 ೧೭ ಲೇಯಾ ಎಂಬಾಕೆಯ ಕಣ್ಣುಗಳು ಕಾಂತಿ ಹೀನವಾಗಿದ್ದವು. ಆದರೆ ರಾಹೇಲಳು ಬಹು ಸುಂದರಿಯು ಲಾವಣ್ಯವತಿಯೂ ಆಗಿದ್ದಳು. 18 ೧೮ ಯಾಕೋಬನು ರಾಹೇಲಳನ್ನು ಪ್ರೀತಿಸಿ, “ನಿನ್ನ ಕಿರಿಯ ಮಗಳಾದ ರಾಹೇಲಳಿಗೋಸ್ಕರ ಏಳು ವರ್ಷ ಸೇವೆ ಮಾಡುವೆನು” ಎಂದು ಹೇಳಲು, 19 ೧೯ ಲಾಬಾನನು, “ಆಕೆಯನ್ನು ಬೇರೊಬ್ಬನಿಗೆ ಕೊಡುವುದಕ್ಕಿಂತ ನಿನಗೆ ಕೊಡುವುದೇ ಒಳ್ಳೆಯದು. ಆದುದರಿಂದ ನೀನು ನನ್ನ ಸಂಗಡ ವಾಸವಾಗಿರು” ಎಂದನು. 20 ೨೦ ಈ ಪ್ರಕಾರ ಯಾಕೋಬನು ರಾಹೇಲಳಿಗೋಸ್ಕರ ಏಳು ವರ್ಷ ಸೇವೆ ಮಾಡಿದನು. ಅವನು ಆಕೆಯನ್ನು ಬಹಳವಾಗಿ ಪ್ರೀತಿಸಿದ್ದರಿಂದ ಅದು ಅವನಿಗೆ ಸ್ವಲ್ಪ ಕಾಲದಂತೆ ಕಾಣಿಸಿತು. 21 ೨೧ ತರುವಾಯ ಯಾಕೋಬನು ಲಾಬಾನನಿಗೆ, “ನನಗೆ ಗೊತ್ತು ಮಾಡಿದ ಕಾಲವು ಪೂರ್ತಿಯಾದವು. ರಾಹೇಲಳನ್ನು ನನಗೆ ಮದುವೆಮಾಡಿ ನನ್ನ ಸ್ವಾಧೀನಕ್ಕೆ ಕೊಡು” ಎಂದು ಕೇಳಿದನು. 22 ೨೨ ಆಗ ಲಾಬಾನನು ಆ ಸ್ಥಳದವರೆಲ್ಲರನ್ನು ಕರೆಸಿ ಔತಣವನ್ನು ಮಾಡಿಸಿದನು. 23 ೨೩ ಸಾಯಂಕಾಲದಲ್ಲಿ ತನ್ನ ಹಿರೀಮಗಳಾದ ಲೇಯಳನ್ನೇ ಯಾಕೋಬನಿಗೆ ಒಪ್ಪಿಸಿಕೊಟ್ಟನು. ಅವನು ಆಕೆಯನ್ನು ಸಂಗಮಿಸಿದನು. 24 ೨೪ ಲಾಬಾನನು ತನ್ನ ಮಗಳಾದ ಲೇಯಳಿಗೆ ಜಿಲ್ಪಾ ಎಂಬ ಒಬ್ಬ ದಾಸಿಯನ್ನು ಕೊಟ್ಟನು. 25 ೨೫ ಬೆಳಗ್ಗೆ ಆಕೆ ಲೇಯಳೆಂದು ಯಾಕೋಬನಿಗೆ ತಿಳಿದು ಬರಲು ಅವನು ಲಾಬಾನನಿಗೆ, “ಇದೇನು ನೀನು ನನಗೆ ಮಾಡಿದ್ದು? ರಾಹೇಲಳಿಗೋಸ್ಕರ ನಿನಗೆ ಸೇವೆಮಾಡಿದೆನಲ್ಲಾ; ಯಾಕೆ ನನಗೆ ಮೋಸ ಮಾಡಿದೆ” ಎಂದು ಕೇಳಿದ್ದಕ್ಕೆ, 26 ೨೬ ಲಾಬಾನನು, “ಹಿರಿ ಮಗಳಿಗಿಂತ ಮೊದಲು ಕಿರಿಯ ಮಗಳನ್ನು ಮದುವೆ ಮಾಡಿಸಿಕೊಡುವುದು ನಮ್ಮ ದೇಶದ ಪದ್ಧತಿಯಲ್ಲ. 27 ೨೭ ಆಕೆಯ ಮದುವೆಯ ವಾರವನ್ನು ಪೂರೈಸು. ಅನಂತರ ಈ ನನ್ನ ಕಿರಿಯ ಮಗಳನ್ನೂ ನಿನಗೆ ಕೊಡುತ್ತೇನೆ; ಈಕೆಗೋಸ್ಕರ ನೀನು ಇನ್ನೂ ಏಳು ವರ್ಷ ಸೇವೆಮಾಡು” ಅಂದನು. 28 ೨೮ ಯಾಕೋಬನು ಅದಕ್ಕೆ ಒಪ್ಪಿ ಹಿರಿಯವಳ ಮದುವೆಯ ವಾರವನ್ನು ತೀರಿಸಿದನು. ಆಗ ಲಾಬಾನನು ತನ್ನ ಮಗಳಾದ ರಾಹೇಲಳನ್ನು ಯಾಕೋಬನಿಗೆ ಮದುವೆ ಮಾಡಿ ಕೊಟ್ಟನು. 29 ೨೯ ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಬಿಲ್ಹಾ ಎಂಬ ದಾಸಿಯನ್ನು ಕೂಡ ಕೊಟ್ಟನು. 30 ೩೦ ಯಾಕೋಬನು ರಾಹೇಲಳನ್ನೂ ಸಂಗಮಿಸಿ ಆಕೆಯನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸಿದನು. ಆಕೆಗೋಸ್ಕರ ಲಾಬಾನನ ಬಳಿಯಲ್ಲಿ ಇನ್ನೂ ಏಳು ವರ್ಷ ಸೇವೆಮಾಡಿದನು. 31 ೩೧ ಲೇಯಳು ಯಾಕೋಬನಿಗೆ ಅಲಕ್ಷ್ಯವಾಗಿದ್ದಾಳೆಂಬುದನ್ನು ಯೆಹೋವನು ನೋಡಿ, ಆಕೆಯು ಗರ್ಭಧರಿಸುವಂತೆ ಅನುಗ್ರಹಿಸಿದನು; ಆದರೆ ರಾಹೇಲಳು ಬಂಜೆಯಾಗಿದ್ದಳು. 32 ೩೨ ಲೇಯಳು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತು, “ಯೆಹೋವನು ನನ್ನ ವ್ಯಥೆಯನ್ನು ನೋಡಿದ್ದಾನೆ, ಇನ್ನು ಮುಂದೆ ನನ್ನ ಗಂಡನು ನನ್ನನ್ನು ಪ್ರೀತಿಸುವನು ಎಂದು ಹೇಳಿ ಅದಕ್ಕೆ ‘ರೂಬೇನ್ ಎಂದು’ ಹೆಸರಿಟ್ಟಳು.” 33 ೩೩ ಆಕೆ ತಿರುಗಿ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತು, “ನಾನು ಗಂಡನ ಅಲಕ್ಷ್ಯಕ್ಕೆ ಗುರಿಯಾದೆನೆಂದು ಯೆಹೋವನು ತಿಳಿದಿದ್ದರಿಂದ ಈ ಮಗುವನ್ನೂ ದಯಪಾಲಿಸಿದನೆಂದು ಹೇಳಿ ಅದಕ್ಕೆ ‘ಸಿಮೆಯೋನ್’ ಎಂದು ಹೆಸರಿಟ್ಟಳು.” 34 ೩೪ ಆಕೆಯು ತಿರುಗಿ ಗರ್ಭಧರಿಸಿ ಗಂಡು ಮಗುವನ್ನು ಹೆತ್ತು, “ಈಗಲಾದರೂ ನನ್ನ ಗಂಡನೂ ನಾನೂ ಒಂದಾಗುವೆವು, ಅವನಿಗೆ ಮೂರು ಮಂದಿ ಗಂಡು ಮಕ್ಕಳನ್ನು ಹೆತ್ತಿದ್ದೇನಲ್ಲಾ” ಎಂದು ಹೇಳಿ ಅದಕ್ಕೆ “ಲೇವಿಯೆಂದು” ಹೆಸರಿಟ್ಟಳು. 35 ೩೫ ಆಕೆಯು ತಿರುಗಿ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತು, “ಈಗ ಯೆಹೋವನಿಗೆ ಉಪಕಾರ ಸ್ತುತಿಮಾಡುವೆನು” ಎಂದು ಹೇಳಿ ಅದಕ್ಕೆ “ಯೆಹೂದಾ” ಎಂದು ಹೆಸರಿಟ್ಟಳು. ಆ ಮೇಲೆ ಆಕೆಗೆ ಗರ್ಭಧಾರಣೆಯಾಗುವುದು ನಿಂತಿತು.

< ಆದಿಕಾಂಡ 29 >