< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 21 >
1 ೧ ಯೆಹೋಷಾಫಾಟನು ಪೂರ್ವಿಕರ ಬಳಿಗೆ ಸೇರಿದನು. ದಾವೀದನಗರದಲ್ಲಿ ಅವನನ್ನು ಪೂರ್ವಿಕರ ಸ್ಮಶಾನ ಭೂಮಿಯಲ್ಲಿ ಸಮಾಧಿಮಾಡಿದ ಮೇಲೆ, ಅವನ ಮಗನಾದ ಯೆಹೋರಾಮನು ಅರಸನಾದನು.
2 ೨ ಇವನಿಗೆ ಅಜರ್ಯ, ಯೆಹೀಯೇಲ್, ಜೆಕರ್ಯ, ಅಜರ್ಯ, ಮಿಕಾಯೇಲ್, ಶೆಫಟ್ಯ ಎಂಬ ತಮ್ಮಂದಿರಿದ್ದರು. ಇವರೆಲ್ಲರೂ ಇಸ್ರಾಯೇಲರ ಅರಸನಾದ ಯೆಹೋಷಾಫಾಟನ ಮಕ್ಕಳು.
3 ೩ ಇವರ ತಂದೆಯು ಇವರಿಗೆ ಯೆಹೂದದ ಕೋಟೆಕೊತ್ತಲಗಳುಳ್ಳ ಪಟ್ಟಣಗಳನ್ನಲ್ಲದೆ ಬೆಳ್ಳಿ ಬಂಗಾರ, ಶ್ರೇಷ್ಠವಸ್ತು ಇತ್ಯಾದಿ ವಿಶೇಷ ದಾನಗಳನ್ನು ಕೊಟ್ಟನು. ಆದರೆ ಯೆಹೋರಾಮನು ಹಿರಿಯ ಮಗನಾಗಿದ್ದುದರಿಂದ ಅವನಿಗೆ ರಾಜ್ಯವನ್ನು ಕೊಟ್ಟನು.
4 ೪ ಯೆಹೋರಾಮನು ತನ್ನ ತಂದೆಯ ರಾಜ್ಯವನ್ನು ಪಡೆದುಕೊಂಡು ತನ್ನ ಆಳ್ವಿಕೆಯನ್ನು ಸ್ಥಿರಗೊಳಿಸಿಕೊಂಡ ಮೇಲೆ, ತನ್ನ ಎಲ್ಲಾ ಸಹೋದರರನ್ನೂ ಕೆಲವು ಮಂದಿ ಇಸ್ರಾಯೇಲ್ ಪ್ರಧಾನರನ್ನೂ ಕತ್ತಿಯಿಂದ ಸಂಹರಿಸಿದನು.
5 ೫ ಯೆಹೋರಾಮನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರ್ಷದವನಾಗಿದ್ದನು; ಅವನು ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು.
6 ೬ ಅವನು ಅಹಾಬನ ಮಗಳನ್ನು ಮದುವೆಮಾಡಿಕೊಂಡದ್ದರಿಂದ, ಅಹಾಬನ ಕುಟುಂಬದವರಾದ ಇಸ್ರಾಯೇಲ್ ರಾಜರ ಮಾರ್ಗವನ್ನು ಅನುಸರಿಸಿ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.
7 ೭ ಆದರೂ ಯೆಹೋವನು ದಾವೀದನಿಗೆ, “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ” ಎಂದು ಒಡಂಬಡಿಕೆ ಮಾಡಿ ಹೇಳಿದ್ದರಿಂದ ದಾವೀದನ ಮನೆತನದವರನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ.
8 ೮ ಯೆಹೋರಾಮನ ಕಾಲದಲ್ಲಿ ಎದೋಮ್ಯರು ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದರು; ಸ್ವತಂತ್ರರಾಗಿ ತಾವೇ ತಮಗೊಬ್ಬ ಅರಸನನ್ನು ನೇಮಿಸಿಕೊಂಡರು.
9 ೯ ಆಗ ಯೆಹೋರಾಮನು ರಾತ್ರಿಯಲ್ಲಿ ತನ್ನ ಸರದಾರರನ್ನೂ ಎಲ್ಲಾ ರಥಬಲವನ್ನೂ ಕೂಡಿಸಿಕೊಂಡು ಯೊರ್ದನ್ ಹೊಳೆಯನ್ನು ದಾಟಿದನು. ಎದೋಮ್ಯರು ಬಂದು ಅವನನ್ನು ಸುತ್ತಿಕೊಳ್ಳಲು ಅವನು ರಾತ್ರಿಯಲ್ಲೇ ದಂಡೆತ್ತಿ ಹೋಗಿ ಅವರನ್ನೂ ಅವರ ರಥಬಲದ ಅಧಿಪತಿಗಳನ್ನೂ ಸೋಲಿಸಿ ಪಾರಾದನು.
10 ೧೦ ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನ ವರೆಗೂ ಅವರ ಶತ್ರುಗಳಾಗಿಯೇ ಇದ್ದಾರೆ. ಆ ಕಾಲದಲ್ಲಿಯೇ ಲಿಬ್ನದವರೂ ಅವನ ಕೈಯಿಂದ ತಪ್ಪಿಸಿಕೊಂಡು ಸ್ವತಂತ್ರರಾದರು. ಯೆಹೋರಾಮನು ತನ್ನ ಪೂರ್ವಿಕರ ದೇವರಾದ ಯೆಹೋವನನ್ನು ಕಡೆಗಣಿಸಿದ್ದರಿಂದ ಹೀಗಾಯಿತು.
11 ೧೧ ಅವನು ಯೆಹೂದದ ಗುಡ್ಡಗಳಲ್ಲಿ, ಪೂಜಾ ಸ್ಥಳಗಳನ್ನು ಏರ್ಪಡಿಸಿ ಯೆರೂಸಲೇಮಿನವರನ್ನು ದೈವದ್ರೋಹ ಮಾಡುವಂತೆ ಪ್ರೇರೇಪಿಸಿ, ಯೆಹೂದ್ಯರನ್ನು ಸನ್ಮಾರ್ಗದಿಂದ ತಪ್ಪಿಸಿದನು.
12 ೧೨ ಹೀಗಿರಲಾಗಿ, ಪ್ರವಾದಿಯಾದ ಎಲೀಯನು ಕಾಗದದ ಮೂಲಕವಾಗಿ ಅವನಿಗೆ, “ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನ ಮಾತನ್ನು ಕೇಳು; ನೀನು ನಿನ್ನ ತಂದೆಯಾದ ಯೆಹೋಷಾಫಾಟನ ಮಾರ್ಗದಲ್ಲಿ ಹಾಗು ಯೆಹೂದ್ಯರ ಅರಸನಾದ ಆಸನ ಮಾರ್ಗದಲ್ಲಿ ನಡೆಯಲಿಲ್ಲ;
13 ೧೩ ಇಸ್ರಾಯೇಲ್ ರಾಜರ ಮಾರ್ಗದಲ್ಲೇ ನಡೆದು, ಅಹಾಬನ ಮನೆಯವರಲ್ಲಿ ಪ್ರಬಲವಾಗಿದ್ದ ದೇವದ್ರೋಹವನ್ನು ಮಾಡುವಂತೆ ಯೆಹೂದ್ಯರನ್ನೂ ಯೆರೂಸಲೇಮಿನವರನ್ನೂ ಪ್ರೇರೇಪಿಸಿರುವೆ; ಮತ್ತು ನಿನ್ನ ತಂದೆಯ ಕುಂಟುಂಬದವರೂ ನಿನಗಿಂತ ಉತ್ತಮರೂ, ನಿನ್ನ ಸಹೋದರರನ್ನೂ ಕೊಂದು ಹಾಕಿರುವೆ.
14 ೧೪ ಆದುದರಿಂದ ಯೆಹೋವನು ನಿನ್ನ ಪ್ರಜೆಗಳ, ಹೆಂಡತಿ ಮಕ್ಕಳನ್ನೂ, ಆಸ್ತಿಪಾಸ್ತಿ ಸರ್ವಸ್ವವನ್ನೂ ಮಹಾ ಆಪತ್ತಿಗೆ ಗುರಿಮಾಡುವನು.
15 ೧೫ ನಿನಗಾದರೋ ಕರುಳು ಬೇನೆಯ ಕಠಿಣ ರೋಗ ಬರುವುದು. ಅದು ಬಹು ದಿನಗಳವರೆಗೂ ಇದ್ದು ವಾಸಿಯಾಗದೇ ನಿನ್ನ ಕರುಳುಗಳು ಹೊರಗೆ ಬೀಳುವುವು” ಎಂದು ತಿಳಿಸಿದನು.
16 ೧೬ ಯೆಹೋವನು ಫಿಲಿಷ್ಟಿಯರನ್ನೂ, ಕೂಷ್ಯರ ನೆರೆಯವರಾದ ಅರಬಿಯರನ್ನೂ ಯೆಹೋರಾಮನಿಗೆ ವಿರೋಧಿಗಳಾಗುವಂತೆ ಪ್ರಚೋದಿಸಿದನು.
17 ೧೭ ಅವರು ಯೆಹೂದದ ಮೇಲೆ ಯುದ್ಧಕ್ಕೆ ಬಂದು, ದೇಶದೊಳಗೆ ನುಗ್ಗಿ, ಅರಮನೆಯಲ್ಲಿ ಸಿಕ್ಕಿದ ಎಲ್ಲಾ ವಸ್ತುಗಳನ್ನೂ, ಅರಸನ ಹೆಂಡತಿಯರನ್ನೂ ಮತ್ತು ಮಕ್ಕಳನ್ನೂ ಸೆರೆಯಾಗಿ ಒಯ್ದರು. ಅವನಿಗೆ ಕಿರಿಯ ಮಗನಾದ ಯೆಹೋವಾಹಾಜನ ಹೊರತು, ಯಾವ ಮಕ್ಕಳೂ ಉಳಿಯಲಿಲ್ಲ.
18 ೧೮ ಇದೆಲ್ಲಾ ಆದಮೇಲೆ, ಯೆಹೋವನು ಅವನ ಕರುಳುಗಳಲ್ಲಿ ವಾಸಿಯಾಗಲಾರದ ರೋಗವನ್ನು ಉಂಟುಮಾಡಿದನು.
19 ೧೯ ಕ್ರಮೇಣವಾಗಿ ಅಂದರೆ, ಸುಮಾರು ಎರಡು ವರ್ಷಗಳಾದ ಮೇಲೆ, ಆದೇ ರೋಗದ ನಿಮಿತ್ತ ಅವನ ಕರುಳುಗಳು ಹೊರಬಿದ್ದವು. ಅವನು ಕಡುಬೇನೆಯಿಂದ ಸತ್ತನು. ಅವನ ಪ್ರಜೆಗಳು ಅವನ ಪೂರ್ವಿಕರಿಗಾಗಿ ಧೂಪಹಾಕಿದ ಹಾಗೆ ಅವನಿಗೆ ಹಾಕಲಿಲ್ಲ.
20 ೨೦ ಅವನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಎಂಟು ವರ್ಷ ರಾಜ್ಯಭಾರಮಾಡಿದನು. ಅವನು ಮರಣಹೊಂದಿದಾಗ ಯಾರೂ ಶೋಕಿಸಲಿಲ್ಲ. ಅವನು ಯಾರಿಗೂ ಇಷ್ಟವಿಲ್ಲದವನಾಗಿ ಗತಿಸಿಹೋದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು; ಆದರೆ ರಾಜರ ಸಮಾಧಿಗಳಲ್ಲಿ ಅವನನ್ನು ಸಮಾಧಿಮಾಡಲಿಲ್ಲ.